ಬೆಂಗಳೂರು, ಮಾ.09 www.bengaluruwire.com: ಸಿಲಿಕಾನ್ ಸಿಟಿಯ ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಅಲ್ಲದೆ, ಸಂಕಷ್ಟದಲ್ಲಿರುವ ನಾಗರಿಕರ ಪಾಲಿಗೆ ನಿಜವಾದ ‘ಸಹಾಯಹಸ್ತ’ವಾಗಿ ನಿಲ್ಲುತ್ತಿದ್ದಾರೆ. ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ರಾಮಮೂರ್ತಿ ನಗರ ಮತ್ತು ಬೇಗೂರು ಪೊಲೀಸರು ತೋರಿದ ಕ್ಷಿಪ್ರ ಕಾರ್ಯಾಚರಣೆ ಈಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಘಟನೆ 1: ಗಾಬರಿಯಾಗಿದ್ದ ಪೋಷಕರಿಗೆ ನಿರಾಳ ತಂದ ರಾಮಮೂರ್ತಿ ನಗರ ಪೊಲೀಸರು:
ಮಾ.6 ರ ತಡರಾತ್ರಿ ಸುಮಾರು 11.19ರ ಸಮಯದಲ್ಲಿ ರಾಮಮೂರ್ತಿ ನಗರದ ವಿಜಯಾ ಬ್ಯಾಂಕ್ ಲೇಔಟ್ನಲ್ಲಿ ಆಕಸ್ಮಿಕವಾಗಿ ಮನೆಯ ಬಾಗಿಲು ಲಾಕ್ ಆಗಿ ಇಬ್ಬರು ಪುಟ್ಟ ಮಕ್ಕಳು ಒಳಗೆ ಸಿಲುಕಿಕೊಂಡಿದ್ದರು. ಹೊರಗಿದ್ದ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾಧ್ಯವಾಗದೆ ಗಾಬರಿಗೊಂಡಿದ್ದರು. ತಕ್ಷಣ ಅವರು ‘ನಮ್ಮ 112’ ಸಹಾಯವಾಣಿಗೆ ಕರೆ ಮಾಡಿದರು.
ಮಾಹಿತಿ ಸಿಕ್ಕ ಕೇವಲ 9 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಹೊಯ್ಸಳ-50 ರ ಸಿಬ್ಬಂದಿಗಳಾದ ಎ.ಎಸ್.ಐ ರಾಮಮೂರ್ತಿ ಮತ್ತು ಹೆಚ್.ಸಿ ವೆಂಕಟೇಶ್ ಅವರು, ಲಾಕ್ ಆಗಿದ್ದ ಬಾಗಿಲನ್ನು ಜಾಣ್ಮೆಯಿಂದ ತೆರೆದು ಮಕ್ಕಳನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದರು. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಘಟನೆ 2: ಕಳೆದುಹೋದ ಮೊಬೈಲ್ ಪತ್ತೆ ಹಚ್ಚಿದ ಬೇಗೂರು ಪೊಲೀಸರು:

ಮತ್ತೊಂದೆಡೆ, ದಿನಾಂಕ 08/03/2026 ರಂದು ಬೆಳಗ್ಗೆ 07:20ಕ್ಕೆ ವ್ಯಕ್ತಿಯೊಬ್ಬರು ತನ್ನ ಬೆಲೆಬಾಳುವ ಮೊಬೈಲ್ ಫೋನ್ ಕಳೆದುಕೊಂಡ ಬಗ್ಗೆ ಸಹಾಯವಾಣಿಗೆ ಮಾಹಿತಿ ನೀಡಿದ್ದರು. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ತಕ್ಷಣ ಸ್ಪಂದಿಸಿದ ಹೊಯ್ಸಳ-215 ರ ಸಿಬ್ಬಂದಿಗಳಾದ ಎ.ಎಸ್.ಐ ಕೆ.ಜೆ. ಹಿರೇಮಠ್ ಮತ್ತು ಸಿಬ್ಬಂದಿ ವರ್ಗದವರು ‘ಮೊಬೈಲ್ ಟ್ರ್ಯಾಕರ್’ ತಂತ್ರಜ್ಞಾನ ಬಳಸಿ ಕೇವಲ 7 ನಿಮಿಷಗಳಲ್ಲಿ ಮೊಬೈಲ್ ಎಲ್ಲಿದೆ ಎಂದು ಪತ್ತೆ ಮಾಡಿದರು. ಕೂಡಲೇ ಮೊಬೈಲ್ ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ದಕ್ಷತೆ ಮೆರೆದಿದ್ದಾರೆ.



















