ಬೆಂಗಳೂರು, ಮಾ.09 www.bengaluruwire.com : ಷೇರು ಮಾರುಕಟ್ಟೆಯ (Stock Market) ಏರಿಳಿತಕ್ಕೆ ಸಿಲುಕಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ ಬೆಂಗಳೂರಿನ 50 ವರ್ಷದ ವ್ಯಕ್ತಿಯೊಬ್ಬರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಷೇರು ಮಾರುಕಟ್ಟೆಯಲ್ಲಿನ ದಿಢೀರ್ ಕುಸಿತವು ಹೂಡಿಕೆದಾರರ ಜೀವನದ ಮೇಲೆ ಎಂತಹ ಭೀಕರ ಪರಿಣಾಮ ಬೀರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮೃತ ವ್ಯಕ್ತಿಯ ದೇಹ ಹೆಬ್ಬಾಳ ರೈಲ್ವೆ ಹಳಿಯ ಬಳಿ ಭಾನುವಾರ ಕಂಡುಬಂದಿದೆ. ದುರ್ಘಟನೆಯ ಬಳಿಕ ಭಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಸಿಎನ್ ಎನ್-ನ್ಯೂಸ್18 ವರದಿ ಮಾಡಿದೆ.
ಘಟನೆಯ ವಿವರ:
ಮೃತ ವ್ಯಕ್ತಿಯನ್ನು ಬೆಂಗಳೂರು ಮೂಲದ 50 ವರ್ಷದ ಉದ್ಯಮಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಇವರು ಕಳೆದ ಕೆಲವು ಸಮಯದಿಂದ ಶೇರು ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳಲ್ಲಿ ಕಂಡುಬಂದ ಭಾರಿ ಕುಸಿತದಿಂದಾಗಿ ಅವರು ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ.

ಸಾಲದ ಸುಳಿ ಮತ್ತು ಮಾನಸಿಕ ಒತ್ತಡ:
ವರದಿಗಳ ಪ್ರಕಾರ, ಹೂಡಿಕೆಗಾಗಿ ಅವರು ವಿವಿಧ ಮೂಲಗಳಿಂದ ದೊಡ್ಡ ಮೊತ್ತದ ಸಾಲವನ್ನು ಮಾಡಿದ್ದರು. ಮಾರುಕಟ್ಟೆ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಸತತ ನಷ್ಟ ಭೀತಿ ತಂದೊಡ್ಡಿತ್ತು. ಮಾಡಿದ ಸಾಲವನ್ನು ತೀರಿಸಲಾಗದೆ ಮತ್ತು ಹೂಡಿಕೆ ಮಾಡಿದ ಹಣವೆಲ್ಲಾ ನಷ್ಟವಾದ ಕಾರಣ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಅವರು ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.



















