ಬೆಂಗಳೂರು, ಮಾ.08 www.bengaluruwire.com: ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ಕಚೇರಿಗೆ ಸ್ವಂತ ನಿವೇಶನ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಮಾತುಕತೆ ನಡೆಸಿ, ಶೀಘ್ರವೇ ನಿವೇಶನ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಭರವಸೆ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ‘ಕೃತಜ್ಞತಾ ಸಮರ್ಪಣಾ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮದ ಪಾವಿತ್ರ್ಯತೆ ಕಾಪಾಡಿ:
“ಇತ್ತೀಚಿನ ದಿನಗಳಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಂದ ಮೇಲೆ ಸುದ್ದಿಯ ಸತ್ಯಾಸತ್ಯತೆ ಸವಾಲಾಗಿದೆ. ಊಹೆಗಳ ಮೇಲೆ ಸುದ್ದಿ ಬರೆಯುವ ಪ್ರವೃತ್ತಿ ಬಿಟ್ಟು, ನಿಖರವಾದ ಮಾಹಿತಿ ಗ್ರಹಿಸಿ ವರದಿ ಮಾಡಬೇಕು. ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು,” ಎಂದು ಪ್ರಭಾಕರ್ ಕಿವಿಮಾತು ಹೇಳಿದರು. ಇದೇ ವೇಳೆ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವುದನ್ನು ಅವರು ಸ್ಮರಿಸಿದರು.


ವಸತಿ ಯೋಜನೆಯಲ್ಲಿ ಶೇ.5 ಮೀಸಲಾತಿಗೆ ಒತ್ತಾಯ:
ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, “ವಾರ್ತಾ ಇಲಾಖೆಯ ಮಾನ್ಯತೆ ಇಲ್ಲದ ಪತ್ರಕರ್ತರಿಗೂ ಮಾಧ್ಯಮ ಸಂಜೀವಿನಿ ಯೋಜನೆ ವಿಸ್ತರಿಸಬೇಕು. ವಸತಿ ಇಲಾಖೆಯ ಯೋಜನೆಗಳಲ್ಲಿ ಪತ್ರಕರ್ತರಿಗೆ ಶೇ.5 ರಷ್ಟು ಮೀಸಲಾತಿ ನೀಡಬೇಕು,” ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಅವರ ಮಾಧ್ಯಮ ಸಲಹೆಗಾರ ಲಕ್ಷ್ಮೀನಾರಾಯಣ, ಪತ್ರಕರ್ತರಿಗೆ ನಿವೇಶನ ಅಥವಾ ಮನೆ ನೀಡುವ ಬಗ್ಗೆ ಶೀಘ್ರವೇ ಸಿಹಿ ಸುದ್ದಿ ನೀಡುವುದಾಗಿ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ 2025-2028ರ ಅವಧಿಯ ಚುನಾವಣೆಯನ್ನು ಯಶಸ್ವಿಯಾಗಿ ಕೈಗೊಂಡ ವಿ.ನಂಜುಡಪ್ಪ ಅವರು ಮಾತನಾಡಿ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಉತ್ತಮವಾಗಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಎಂದು ಹಾರೈಸಿದರು. ಇದಕ್ಕೆ ಕೆಯುಡಬ್ಲ್ಯುಜೆ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಕೂಡ ದನಿಗೂಡಿಸಿದರು.
ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ:
ನೂತನ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿ ಪದಗ್ರಹಣ ಮಾಡಿದರು. ಅದಾದ ಬಳಿಕ ಸಂಘದ ನೂತನ ಜಿಲ್ಲಾಧ್ಯಕ್ಷ ಸೋಮಶೇಖರ್ ಗಾಂಧಿ ನೇತೃತ್ವದಲ್ಲಿ ಮೊದಲ ಸಭೆ ನಡೆಯಿತು. ಇದಕ್ಕೂ ಮುನ್ನ ಜಿಲ್ಲಾಧ್ಯಕ್ಷ ಸೋಮಶೇಖರ್ ಮಾತನಾಡಿ, ಕೆಯುಡಬ್ಲ್ಯುಜೆ ನಡೆದು ಬಂದ ಹಾದಿ ಹಾಗೂ ಬೆಂಗಳೂರು ನಗರ ಜಿಲ್ಲಾ ಸಂಘಕ್ಕೆ ಸರ್ಕಾರದಿಂದ ನಿವೇಶನ ಅಥವಾ ಕಟ್ಟಡ ಒದಗಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಐಎಫ್‌ಡಬ್ಲ್ಯುಜೆ ರಾಷ್ಟ್ರಾಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಮುಖ್ಯ ಅತಿಥಿಗಳಾಗಿ ಐಎಫ್ ಡಬ್ಲ್ಯುಜೆ ರಾಷ್ಟ್ರಾಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಅಧ್ಯಕ್ಷರಾದ ರಮೇಶ್ ಪಾಳ್ಯ, ಬೆಂಗಳೂರು ಪತ್ರಿಕಾ ಛಾಯಾಗ್ರಹಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್, ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಇದೇ ಮಾರ್ಚ್ 28 ಮತ್ತು 29 ರಂದು ಕೆಯುಡಬ್ಲ್ಯುಜೆ ವಾರ್ಷಿಕ ಸಮ್ಮೇಳನ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಲಾಯಿತು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.



















