ನವದೆಹಲಿ, ಮಾ.07 www.bengaluruwire.com : ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಇಂದು ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ದೇಶಾದ್ಯಂತ ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಶನಿವಾರದಿಂದ ಅನ್ವಯವಾಗುವಂತೆ ಭಾರೀ ಏರಿಕೆ ಮಾಡಲಾಗಿದೆ.
ಸಿಲಿಂಡರ್ ದರ ಏರಿಕೆ ವಿವರ:
ಪರಿಷ್ಕೃತ ದರದ ಅನ್ವಯ, ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ 60 ರೂ. ಹೆಚ್ಚಳವಾಗಿದ್ದರೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 115 ರೂ. ಏರಿಕೆಯಾಗಿದೆ. ಏಪ್ರಿಲ್ 2025ರ ನಂತರ ದೇಶೀಯ ಎಲ್‌ಪಿಜಿ ಬೆಲೆಯಲ್ಲಿ ಕಂಡುಬಂದ ಮೊದಲ ಅತಿದೊಡ್ಡ ಏರಿಕೆ ಇದಾಗಿದ್ದು, ಗೃಹಿಣಿಯರು ಹಾಗೂ ಹೋಟೆಲ್ ಉದ್ಯಮಿಗಳ ಬಜೆಟ್ ಬುಡಮೇಲು ಮಾಡಿದೆ.
ಪ್ರಮುಖ ನಗರಗಳಲ್ಲಿ ಗೃಹಬಳಕೆ ಸಿಲಿಂಡರ್ (14.2 ಕೆಜಿ) ಹೊಸ ದರ ಪಟ್ಟಿ:

ಬೆಂಗಳೂರಿನಲ್ಲಿ ಇಂದಿನಿಂದ ಸಿಲಿಂಡರ್ ಬೆಲೆ ₹900ರ ಗಡಿ ದಾಟಿದೆ. ವಿವಿಧ ನಗರಗಳ ವಿವರ ಇಲ್ಲಿದೆ:
* ಬೆಂಗಳೂರು: ₹855.50 ರಿಂದ ₹915.50 ಕ್ಕೆ ಏರಿಕೆ.
* ನವದೆಹಲಿ: ₹853 ರಿಂದ ₹913.
* ಮುಂಬೈ: ₹852.50 ರಿಂದ ₹912.50.
* ಕೋಲ್ಕತ್ತಾ: ₹879 ರಿಂದ ₹930.
* ಚೆನ್ನೈ: ₹868.50 ರಿಂದ ₹928.50.
ವಾಣಿಜ್ಯ ಸಿಲಿಂಡರ್ ಬೆಲೆಯೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ₹1,929.00 ತಲುಪಿದೆ. ಇದರಿಂದ ಹೊರಗಿನ ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.
ಇಂಧನ ಕೊರತೆಯಿಲ್ಲ; ಆತಂಕ ಬೇಡ ಎಂದ ಕೇಂದ್ರ ಸರ್ಕಾರ:
ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಾತಾವರಣದಿಂದಾಗಿ ಜಾಗತಿಕವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದ ನಡುವೆ, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಜನರಿಗೆ ಅಭಯ ನೀಡಿದ್ದಾರೆ. “ಭಾರತದಲ್ಲಿ ಇಂಧನ ಸಂಗ್ರಹ ಸಮರ್ಪಕವಾಗಿದೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಇಂಧನ ನೀಡುವುದು ಸರ್ಕಾರದ ಆದ್ಯತೆ,” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿದೆ ಎಂಬ ಸಾಮಾಜಿಕ ಜಾಲತಾಣದ ವದಂತಿಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಕಟ್ಟುನಿಟ್ಟಾಗಿ ನಿರಾಕರಿಸಿದೆ. ಪೂರೈಕೆ ಜಾಲ ಸುಗಮವಾಗಿದ್ದು, ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಗ್ರಾಹಕರಲ್ಲಿ ವಿನಂತಿಸಿದೆ.




















