ಬೆಂಗಳೂರು, ಮಾ.07 www.bengaluruwire.com: ರಾಜಧಾನಿಯ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ‘ಸ್ವಚ್ಛ ಸರ್ವೇಕ್ಷಣ 2025–26’ ಅಭಿಯಾನದ ಅಂಗವಾಗಿ ಶನಿವಾರದಂದು ಸರ್ವಜ್ಞನಗರ ವಿಭಾಗದ ಬಾಣಸವಾಡಿ ಬಂಡೆ ಪಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ‘ಕಾಂಪೋಸ್ಟ್ ಸಂತೆ’ ಸಾರ್ವಜನಿಕರ ಗಮನ ಸೆಳೆಯಿತು.
ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ 7ನೇ ದಿನದ ಕಾರ್ಯಕ್ರಮದಲ್ಲಿ, ಹಸಿಕಸದಿಂದ ಗೊಬ್ಬರ ತಯಾರಿಕೆ ಮತ್ತು ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣದ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು.
ಸಾರ್ವಜನಿಕರ ಭಾರಿ ಸ್ಪಂದನೆ:
ಕಾರ್ಯಕ್ರಮದಲ್ಲಿ BSWML CEO ಶ್ರೀ ಕರೀಗೌಡ, ಸುಮಾರು 1500ಕ್ಕೂ ಹೆಚ್ಚು ಸಾರ್ವಜನಿಕರು, ಶಾಲಾ ಮಕ್ಕಳು ಮತ್ತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (RWA) ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ಕಾಂಪೋಸ್ಟ್ ತಯಾರಿಕೆ, ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆಯ ಬಗ್ಗೆ ಮಾಹಿತಿ ನೀಡುವ 13ಕ್ಕೂ ಹೆಚ್ಚು ಮಳಿಗೆಗಳನ್ನು ಇಲ್ಲಿ ಸ್ಥಾಪಿಸಲಾಗಿತ್ತು.

ಮಳಿಗೆಗಳ ವಿಶೇಷತೆ:
ಕಾಂಪೋಸ್ಟ್ ಉತ್ಪನ್ನಗಳು: ಶುದ್ಧ ಲಾಭ, ಡೈಲಿ ಡಂಪ್, ಸ್ಟೋನ್ ಸೂಪ್ ಸೇರಿದಂತೆ ಪ್ರಮುಖ ಸಂಸ್ಥೆಗಳು ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಿದವು.
ತ್ಯಾಜ್ಯ ನಿರ್ವಹಣೆ: ಹಸಿರು ದಳ ಮತ್ತು ಸಂಗ್ರಹ ವಿಕಲ್ಪ ಸಂಸ್ಥೆಗಳಿಂದ ತ್ಯಾಜ್ಯ ವಿಲೇವಾರಿ ಮಾಹಿತಿ.
ಪರಿಸರ ಸ್ನೇಹಿ ಆಯ್ಕೆಗಳು: ಸ್ಮಾರ್ಟ್ ರಿಫಿಲ್ ಮತ್ತು ರೆಂಟ್ ಎ ಕಟ್ಲರಿಯಂತಹ ಮರುಬಳಕೆ ಸೇವೆಗಳ ಪ್ರದರ್ಶನ.
ಆಯುಕ್ತರ ಮನವಿ:
ನಗರವನ್ನು ಸ್ವಚ್ಛವಾಗಿಡಲು ಪಾಲಿಕೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ನಾಗರಿಕರು ತಮ್ಮ ಮನೆಯಲ್ಲಿಯೇ ಕಸ ವಿಂಗಡಣೆ ಮಾಡಿ, ಹಸಿಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿದರೆ ತ್ಯಾಜ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಮೂಲಕ ಬೆಂಗಳೂರನ್ನು ಸುಂದರ ನಗರವನ್ನಾಗಿ ಮಾಡಲು ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು.
ಈ ವಾರದ ಸಾಧನೆ:
ಮಾರ್ಚ್ 01 ರಿಂದ 06 ರವರೆಗೆ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟು 300 ಟನ್‌ಗೂ ಹೆಚ್ಚು ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಇದರಲ್ಲಿ ಪ್ಲಾಗಿಂಗ್, ಬ್ಲಾಕ್ ಸ್ಪಾಟ್ ಬ್ಯೂಟಿಫಿಕೇಷನ್ ಮತ್ತು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಾಳೆ ವಾಕ್‌ಥಾನ್:
ಮಾರ್ಚ್ 08ರ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ, ಯಲಹಂಕ ಕೆರೆಯ ಸುತ್ತಮುತ್ತ 6 ಕಿ.ಮೀ ಉದ್ದದ ಬೃಹತ್ ‘ವಾಕ್‌ಥಾನ್’ ಆಯೋಜಿಸಲಾಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.




















