ಬೆಂಗಳೂರು, ಮಾ.06 www.bengaluruwire.com: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಸಿಬ್ಬಂದಿಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಕರ್ತವ್ಯದ ಅವಧಿಯಲ್ಲಿ ಅಥವಾ ಇತರೆ ಕಾರಣಗಳಿಂದ ಮೃತಪಟ್ಟ 35 ಸಿಬ್ಬಂದಿಗಳ ಕುಟುಂಬಗಳಿಗೆ ಒಟ್ಟು 8.22 ಕೋಟಿ ರೂ. ಪರಿಹಾರ ಧನವನ್ನು ವಿತರಿಸಲಾಗಿದೆ.
ಬೆಂಗಳೂರಿನ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಈ ಚೆಕ್‌ಗಳನ್ನು ವಿತರಿಸಿದರು.
ಪರಿಹಾರ ವಿತರಣೆಯ ವಿವರ:
ಅಪಘಾತ ಮರಣ: ಅಪಘಾತದಿಂದ ಮೃತಪಟ್ಟ 4 ಸಿಬ್ಬಂದಿಗಳ ಅವಲಂಬಿತರಿಗೆ ‘ಸಾರಿಗೆ ಸುರಕ್ಷಾ ವಿಮಾ ಯೋಜನೆ’ ಅಡಿ ತಲಾ 1 ಕೋಟಿ ರೂ. ಗಳಂತೆ ಒಟ್ಟು 4 ಕೋಟಿ ರೂ. ವಿತರಿಸಲಾಯಿತು.

ನೈಸರ್ಗಿಕ ಮರಣ: ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ ಇತರೆ ಕಾರಣಗಳಿಂದ ಮೃತಪಟ್ಟ 28 ಸಿಬ್ಬಂದಿಗಳ ಕುಟುಂಬಗಳಿಗೆ ತಲಾ 14 ಲಕ್ಷ ರೂ. ಹಾಗೂ 3 ಪ್ರಕರಣಗಳಲ್ಲಿ ತಲಾ 10 ಲಕ್ಷ ರೂ. ನಂತೆ ಒಟ್ಟು 4.22 ಕೋಟಿ ರೂ. ವಿತರಿಸಲಾಯಿತು.
ಅನುಕಂಪದ ಆಧಾರದ ಉದ್ಯೋಗ:
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, “ಮೃತರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಚಾಲಕ, ನಿರ್ವಾಹಕ ಹಾಗೂ ತಾಂತ್ರಿಕ ಹುದ್ದೆಗಳಿಗೆ ತ್ವರಿತವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ನಾಲ್ಕು ಸಾರಿಗೆ ನಿಗಮಗಳಲ್ಲಿ 1400 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಹತೆ ಇದ್ದಲ್ಲಿ ಜೇಷ್ಠತೆ ಅನ್ವಯ ನೇಮಕ ಮಾಡಲಾಗುವುದು” ಎಂದರು.
ಸಚಿವರಿಂದ ಕಿವಿಮಾತು:
ಪರಿಹಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳದೆ ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಅಥವಾ ಬ್ಯಾಂಕ್‌ಗಳಲ್ಲಿ ಸುರಕ್ಷಿತವಾಗಿ ಠೇವಣಿ ಇಡುವಂತೆ ಸಚಿವರು ಸಲಹೆ ನೀಡಿದರು. ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗಬೇಡಿ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್ಆರ್‌ಟಿಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕಿ ಗಾಯಿತ್ರಿ ಕೆ.ಎಂ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.




















