ಬೆಂಗಳೂರು ಮಾ.05 www.bengaluruwire.com: ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ದಂತ ಚಿಕಿತ್ಸೆ ನೀಡುವ ಉದ್ದೇಶದ ‘ದಂತ ಭಾಗ್ಯ’ ಯೋಜನೆಯನ್ನು ಇನ್ಮುಂದೆ ‘ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ’ (AB PMJAY-CM’s ArK) ಅಡಿಯಲ್ಲಿ ವಿಲೀನಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಇದರಿಂದಾಗಿ ಇನ್ನು ಮುಂದೆ ಅರ್ಹ ಫಲಾನುಭವಿಗಳು ಈ ಯೋಜನೆಯಡಿ ಉಚಿತವಾಗಿ ಸಂಪೂರ್ಣ ಅಥವಾ ಭಾಗಶಃ ಹಲ್ಲು ಜೋಡಣೆ (Dentures) ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದಾಗಿದೆ.
ಯಾರಿಗೆ ಸಿಗಲಿದೆ ಈ ಸೌಲಭ್ಯ?:
ದಂತ ಭಾಗ್ಯ ಯೋಜನೆಯಡಿ ಈ ಹಿಂದೆ ಫಲಾನುಭವಿಗಳ ವಯೋಮಿತಿಯನ್ನು 60 ವರ್ಷಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಪರಿಷ್ಕೃತ ಆದೇಶದಂತೆ 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಬಿಪಿಎಲ್ (PHH) ಕಾರ್ಡ್ ಹೊಂದಿರುವ ನಾಗರಿಕರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಸಂಪೂರ್ಣವಾಗಿ ಹಲ್ಲು ಇಲ್ಲದವರು ಅಥವಾ ಮೂರು ಅಥವಾ ಅದಕ್ಕಿಂತ ಹೆಚ್ಚು ಹಲ್ಲುಗಳನ್ನು ಕಳೆದುಕೊಂಡವರು ಈ ಉಚಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ.

ಸರ್ಕಾರದ ಹೊಸ ಕ್ರಮದ ಲಾಭವೇನು?:
ದರ ನಿಗದಿ: ಭಾಗಶಃ ಹಲ್ಲು ಜೋಡಣೆಗೆ 1,000 ರೂ. ಮತ್ತು ಸಂಪೂರ್ಣ ಹಲ್ಲು ಜೋಡಣೆಗೆ 3,000 ರೂ.ಗಳ ಏಕರೂಪದ ದರವನ್ನು ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ನಿಗದಿಪಡಿಸಲಾಗಿದೆ.
ವ್ಯವಸ್ಥಿತ ನಿರ್ವಹಣೆ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಈ ಪ್ರಕ್ರಿಯೆಯ ವ್ಯಾಲಿಡೇಶನ್ ನಡೆಯಲಿದ್ದು, ಪಾರದರ್ಶಕತೆ ಹೆಚ್ಚಲಿದೆ.
ಹೆಚ್ಚಿನ ಆಸ್ಪತ್ರೆಗಳ ಲಭ್ಯತೆ: ಪ್ರಸ್ತುತ 44 ದಂತ ವೈದ್ಯಕೀಯ ಕಾಲೇಜುಗಳು ಮತ್ತು 13 ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಿದ್ದು, ಎಬಿ-ಪಿಎಂಜೆಎವೈ ಅಡಿ ಸೇರ್ಪಡೆಯಾಗಿರುವುದರಿಂದ ರೋಗಿಗಳಿಗೆ ನೋಂದಣಿ ಮತ್ತು ಚಿಕಿತ್ಸೆ ಪಡೆಯುವುದು ಸರಳವಾಗಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಭಾಕರ್ ಟಿ. ಅವರು ಈ ಆದೇಶವನ್ನು ಹೊರಡಿಸಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ.





















