ಬಾರಕೂರು (ಉಡುಪಿ ಜಿಲ್ಲೆ) www.bengaluruwire.com : ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲೊಂದಾದ ಬಾರಕೂರಿನ ಸಂತೆ ಮಾರ್ಕೆಟ್ ಬಳಿ ಇರುವ ಹಿರಿಯ ಪುರೋಹಿತರಾದ ಬಾರಕೂರಿನ ವೇದಮೂರ್ತಿ ಹೃಷಿಕೇಶ ಬಾಯರಿ ಅವರ ಮೂಲ ನಾಗಬನ ದೇವರ ಸನ್ನಿಧಿಯಲ್ಲಿ ಇದೇ ಮಾರ್ಚ್ 6ರಂದು ಅತ್ಯಂತ ಪವಿತ್ರವಾದ ‘ಚತುಃಪವಿತ್ರ ನಾಗಮಂಡಲೋತ್ಸವ’ ಜರುಗಲಿದೆ.
ಕರಾವಳಿ ಕರ್ನಾಟಕದ ಶ್ರದ್ಧಾಭಕ್ತಿಯ ಸಂಕೇತವಾಗಿರುವ ಈ ಮಹೋತ್ಸವವು ವೆಂಕಟರಮಣ ಶಾಸ್ತ್ರಿ ಗೋಳಿಬೆಟ್ಟು ಅವರ ಪ್ರಧಾನ ಪೌರೋಹಿತ್ಯದಲ್ಲಿ ನೆರವೇರಲಿದೆ. ಮಾರ್ಚ್ 5 ಮತ್ತು 6 ರಂದು ವಿವಿಧ ಹೋಮ-ಹವನಗಳು ಹಾಗೂ ಸಾಂಸ್ಕೃತಿಕ ಧಾರ್ಮಿಕ ವಿಧಿಗಳು ನಡೆಯಲಿದ್ದು, ಭಕ್ತಸಾಗರವೇ ಹರಿದುಬರುವ ನಿರೀಕ್ಷೆಯಿದೆ.

ಮೂಲ ನಾಗಬನ


ಧಾರ್ಮಿಕ ವಿಧಿವಿಧಾನಗಳ ವಿವರ:
ಮಾರ್ಚ್ 5: ಪೂರ್ವಭಾವಿ ಪೂಜೆಗಳು:

ನಾಗಬನದಲ್ಲಿ ಆಶ್ಲೇಷಾ ಬಲಿ, ನಾಗಮಂಡಲ ಚಪ್ಪರದಲ್ಲಿ ರಾಕ್ಷೋಘ್ನಹೋಮ ಹಾಗೂ ವಾಸ್ತು ಪೂಜಾಬಲಿಗಳು ನಡೆಯಲಿವೆ.
ಮಾರ್ಚ್ 6: ಮಹೋತ್ಸವದ ದಿನ
ಬೆಳಗ್ಗೆ 7 ಗಂಟೆಯಿಂದ ಗಣಪತಿ ಪ್ರಾರ್ಥನೆ, ಪುಣ್ಯಾಹವಾಚನ, ದೇವನಾಂದಿ ಋತ್ವಿಗರಣೆ ಸೇರಿದಂತೆ ಗಣಪತಿ ಯಾಗ, ದುರ್ಗಾಹೋಮ, ನವಗ್ರಹ ಹೋಮ, ಪವಮಾನ ಹೋಮ, ತಿಲಹೋಮ, ಕೂಷ್ಮಾಂಡ ಹೋಮ, ಸರ್ಪಸೂಕ್ತ, ಸ್ಕಂದ ಸೂಕ್ತ ಹಾಗೂ ನಾಗಯಕ್ಷಿ ಹೋಮಗಳು ಸಂಪನ್ನಗೊಳ್ಳಲಿವೆ. ಮಧ್ಯಾಹ್ನ ಬ್ರಹ್ಮಕಲಶಾಭಿಷೇಕ, ಮಹಾಪ್ರಸನ್ನ ಪೂಜೆ ಹಾಗೂ ಭವ್ಯ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ವಿಶೇಷ:
ಸಂಜೆ 5 ಗಂಟೆಗೆ ಹೊಸಾಳ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮೀಪದ ಆದಿಮೂಲ ನಾಗಬನದಲ್ಲಿ ಹಾಲಿಟ್ಟು ಸೇವೆ ಸಲ್ಲಿಸಿ, ದೇವರ ಸ್ವಸ್ತಿಕೆ ಹಾಗೂ ಉತ್ಸವ ಮೂರ್ತಿಯನ್ನು ಪುರ ಮೆರವಣಿಗೆಯ ಮೂಲಕ ಮೂಲ ಸನ್ನಿಧಿಗೆ ತರಲಾಗುವುದು. ರಾತ್ರಿ 7 ಗಂಟೆಗೆ ಮಂಡಲಪೂಜೆ ಹಾಗೂ ಆಕರ್ಷಕ ಚತುಃಪವಿತ್ರ ನಾಗಮಂಡಲ ಸೇವೆ ಆರಂಭವಾಗಲಿದೆ.
ಈ ಕಾರ್ಯಕ್ರಮದಲ್ಲಿ ನಾಗಪಾತ್ರಿಗಳಾಗಿ ವೆಂಕಟರಮಣ ಹೊಳ್ಳ ಕಾರ್ಕಡ, ಬಿ.ಎನ್. ರಾಮಚಂದ್ರ ಕುಂಜಿತ್ತಾಯ ಕಲ್ಲಂಗಳ ಹಾಗೂ ಶಂಕರನಾರಾಯಣ ಬಾಯರಿ ಬೀಜಾಡಿ ಪಾಲ್ಗೊಳ್ಳಲಿದ್ದಾರೆ. ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದ ವೈದ್ಯನಾಥೇಶ್ವರ ಡಮರು ಮೇಳ, ಮುದ್ದೂರು ನಟರಾಜ ವೈದ್ಯ ಹಾಗೂ ಬಾಲಕೃಷ್ಣ ವೈದ್ಯ ಅವರು ನಾಗಕನ್ನಿಕೆಯರಾಗಿ ಸೇವೆ ಸಲ್ಲಿಸಲಿದ್ದಾರೆ. ಚಂದ್ರಶೇಖರ ವೈದ್ಯ ಡಮರು ಸೇವೆಯಲ್ಲಿ ಸಹಕರಿಸಲಿದ್ದಾರೆ.
ನಾಗಮಂಡಲ ಸೇವೆಯ ಮಹತ್ವ:
ನಾಗಸೇವೆಗಳಲ್ಲೆಲ್ಲ ವಿಶೇಷವಾದುದು ಹಾಗೂ ಹೆಚ್ಚು ಖರ್ಚಿನದು ಎಂದರೇ ಅದು ನಾಗಮಂಡಲ. ನಾಗ ತುಂಬ ಶುದ್ಧತೆಯನ್ನು ಪವಿತ್ರತೆಯನ್ನು ಇಷ್ಟ ಪಡುವ ದೇವತೆ, ಆದುದರಿಂದ ಪವಿತ್ರ ಗಂಟಿನ ಮಂಡಲವನ್ನು ರಂಗೋಲಿಯಿಂದ ಬರೆದು ಅದರ ಸುತ್ತ ನರ್ತನ ಸೇವೆ ನಡೆಯುತ್ತದೆ. ಒಂದು ಪವಿತ್ರ, ನಾಲ್ಕು ಪವಿತ್ರ, ಎಂಟು ಪವಿತ್ರ, ಹನ್ನೆರಡು ಪವಿತ್ರ ಹಾಗೂ ಹದಿನಾರು ಪವಿತ್ರದ ಗಂಟುಗಳನ್ನು ತನ್ನ ಸುದೀರ್ಘ ಮೈಯಿಂದಲೇ ಹಾಕಿ, ಹೆಡೆಬಿಚ್ಚಿ ಕುಳಿತ ನಾಗನ ಮಂಡಲಗಳನ್ನು ಬರೆಯುವ ಕ್ರಮವಿದೆ.
ಚತುಃಪವಿತ್ರ ನಾಗಮಂಡಲವು ಕರಾವಳಿ ಕರ್ನಾಟಕದ ಅತ್ಯಂತ ವಿಶಿಷ್ಟ, ಪವಿತ್ರ ಮತ್ತು ವೆಚ್ಚದಾಯಕ ನಾಗಾರಾಧನಾ ಸೇವೆಯಾಗಿದೆ. ಇದು ನಾಗದೇವರಿಗೆ ಸಲ್ಲಿಸುವ ಪ್ರಮುಖ ಸೇವೆಗಳಲ್ಲೊಂದಾಗಿದ್ದು, ಕೌಟುಂಬಿಕ ಸಂಕಷ್ಟಗಳು, ರೋಗ-ರುಜಿನಗಳು ಮತ್ತು ಪ್ರಾಪಂಚಿಕ ದುರಿತಗಳಿಂದ ಮುಕ್ತಿ ಪಡೆಯಲು, ಭಕ್ತರು ಈ ಸೇವೆಯನ್ನು ಆಯೋಜಿಸುತ್ತಾರೆ.
“ರಂಗೋಲಿಯಿಂದ ಬಿಡಿಸಿದ ಪವಿತ್ರ ಗಂಟಿನ ಮಂಡಲದ ಸುತ್ತ ವೈದ್ಯರು ಮತ್ತು ನಾಗಪಾತ್ರಿಗಳು ನಡೆಸುವ ನರ್ತನವು ಕಣ್ಣಿಗೆ ಹಬ್ಬದಂತಿರುತ್ತದೆ. ಚತುಃಪವಿತ್ರ ನಾಗಾಮಂಡಲ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಬರುವ ಭಕ್ತರಿಗೆ ಮಹಾ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ” ಎಂದು ಸಂಘಟಕರು ಹಾಗೂ ಸೇವಾಕರ್ತರಾದ ಹೃಷಿಕೇಶ ಬಾಯರಿ, ಉಮೇಶ್ ಬಾಯರಿ ಮತ್ತು ಶ್ರೀನಿವಾಸ ಬಾಯರಿ ತಿಳಿಸಿದ್ದಾರೆ.























