ಬೆಂಗಳೂರು, ಮಾ.01 www.bengaluruwire.com: ವಾಹನಗಳನ್ನು ಭೌತಿಕವಾಗಿ ಪರೀಕ್ಷಿಸದೆಯೇ ನಿಯಮಬಾಹಿರವಾಗಿ ಫಿಟ್ನೆಸ್ ಪ್ರಮಾಣಪತ್ರ (ಫಾರಂ 38ಎ) ನೀಡಿರುವ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುಮಾರು 10,200ಕ್ಕೂ ಹೆಚ್ಚು ಗುಜರಾತ್ ರಾಜ್ಯದ ನೋಂದಾಯಿತ ವಾಹನಗಳಿಗೆ ಈ ರೀತಿ ಅಕ್ರಮವಾಗಿ ದಾಖಲೆ ಸೃಷ್ಟಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ಹಿನ್ನೆಲೆ:
ವಕೀಲ ನಟರಾಜ್ ಶರ್ಮಾ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಹಗರಣ ಬಯಲಿಗೆ ಬಂದಿದೆ. ಗುಜರಾತ್ ಮೂಲದ ಸಾವಿರಾರು ವಾಹನಗಳು ಬೆಂಗಳೂರಿನಲ್ಲಿ ಭೌತಿಕವಾಗಿ ಹಾಜರಿಲ್ಲದಿದ್ದರೂ, ಸಾರಿಗೆ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅವುಗಳಿಗೆ ಫಿಟ್ನೆಸ್ ಪ್ರಮಾಣಪತ್ರಗಳನ್ನು ನೀಡಲಾಗಿತ್ತು. ಈ ದೂರಿನ ಗಂಭೀರತೆಯನ್ನು ಪರಿಗಣಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಿದ್ದರು.

ಇಲಾಖಾ ವಿಚಾರಣೆಯಲ್ಲಿ ಬಯಲಾದ ಲೋಪ:
ಪ್ರಾಥಮಿಕ ಹಂತದ ಇಲಾಖಾ ವಿಚಾರಣೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಂದ ಮೇಲ್ನೋಟಕ್ಕೆ ಗಂಭೀರ ಲೋಪದೋಷಗಳು ಕಂಡುಬಂದಿವೆ. ತಾಂತ್ರಿಕ ಪರೀಕ್ಷೆ ನಡೆಸದೆ ಕೇವಲ ದಾಖಲೆಗಳಲ್ಲಿ ವಾಹನಗಳು ಸುಸ್ಥಿತಿಯಲ್ಲಿವೆ ಎಂದು ತೋರಿಸಿರುವುದು ಸಾಬೀತಾಗಿದೆ. ಈ ಹಗರಣದಲ್ಲಿ ಗುಜರಾತ್ ಮೂಲದ ಕೆಲವು ಅಧಿಕಾರಿಗಳು ಹಾಗೂ ಸ್ಥಳೀಯ ಮಧ್ಯವರ್ತಿಗಳ ದೊಡ್ಡ ಜಾಲವೇ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ತನಿಖೆ ಆರಂಭ:
ಹೆಚ್ಚಿನ ತನಿಖೆಗಾಗಿ ಫೆಬ್ರವರಿ 28ರಂದು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚನೆಯಾಗುವ ಸಾಧ್ಯತೆಯಿದೆ. ಸಾರಿಗೆ ಇಲಾಖೆಯ ಸಾಫ್ಟ್‌ವೇರ್ ದುರ್ಬಳಕೆ ಆಗಿದೆಯೇ ಎಂಬ ಆಯಾಮದಲ್ಲೂ ತನಿಖೆ ಮುಂದುವರಿದಿದೆ.























