ಬೆಂಗಳೂರು, ಮಾ.01 www.bengaluruwire.com: ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಲಾಗಿರುವ ‘ನಮ್ಮ ಮೆಟ್ರೋ’ 3ನೇ ಹಂತದ ಯೋಜನೆಯು ನಾಗರಭಾವಿಯ ಹಸಿರು ಹೊದಿಕೆಗೆ ಕಂಟಕ ತಂದೊಡ್ಡಿದೆ.
ಈ ಯೋಜನೆಯಿಂದಾಗಿ ನಗರದಾದ್ಯಂತ ಒಟ್ಟು 6,868 ಮರಗಳು ಕೊಡಲಿಗೆ ಬಲಿಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ಹಿರಿಯ ಪರಿಸರವಾದಿ ದತ್ತಾತ್ರೇಯ ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್‌ನ (BET) ಪ್ರತಿನಿಧಿಗಳು ನಾಗರಭಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ಶನಿವಾರ ಮೌನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ದತ್ತಾತ್ರೇಯ ದೇವರೆ ಅವರು, “ಬೆಂಗಳೂರು ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿಯಾಗಿ, ಈಗ ಕಾಂಕ್ರೀಟ್ ಸಿಟಿಯಾಗಿ ಮಾರ್ಪಡುತ್ತಿದೆ. ಮೆಟ್ರೋ ಫೇಸ್-3 ಕಾಮಗಾರಿಯಿಂದಾಗಿ ಬೆಂಗಳೂರು ಕೂಡ ದೆಹಲಿಯಂತೆ ವಾಯುಮಾಲಿನ್ಯದ ಕೇಂದ್ರವಾಗುವ ಅಪಾಯವಿದೆ” ಎಂದು ಎಚ್ಚರಿಸಿದರು. “ಅಭಿವೃದ್ಧಿ ನಮಗೆ ಬೇಕು, ಆದರೆ ಮರಗಳನ್ನು ಕಡಿದು ಎಲ್ಲಿ ನೆಡಲಾಗುತ್ತಿದೆ ಎಂಬ ಮಾಹಿತಿ ಯಾರಿಗೂ ಇಲ್ಲ. ಒಂದು ಮರಕ್ಕೆ 2,000 ರೂಪಾಯಿ ನೀಡಿ ಐದು ವರ್ಷ ನಿರ್ವಹಣೆ ಮಾಡುತ್ತೇವೆ ಎನ್ನುತ್ತಾರೆ, ಆದರೆ ಮೊದಲ ಹಂತದಲ್ಲಿ ನೆಟ್ಟ ಮರಗಳು ಎಲ್ಲಿವೆ ಎಂಬ ದಾಖಲೆಗಳಿಲ್ಲ” ಎಂದು ಅವರು ಆಕ್ರೋಶ ಹೊರಹಾಕಿದರು.
ಪ್ರಮುಖವಾಗಿ, ಮರ ಸಂಖ್ಯೆ 1683 ಎಂದು ಗುರುತಿಸಲಾದ ಸುಮಾರು 200 ವರ್ಷಗಳಿಗೂ ಅಧಿಕ ಇತಿಹಾಸವಿರುವ ಭವ್ಯವಾದ ‘ಹೆರಿಟೇಜ್’ ಮರವನ್ನು ಕಡಿಯಲು ಬಿಎಂಆರ್‌ಸಿಎಲ್ ಮುಂದಾಗಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಪಾರಂಪರಿಕ ಮರಕ್ಕೆ ಸಂಚಕಾರ:
ನಾಗರಭಾವಿಯ 80 ಅಡಿ ರಸ್ತೆಯಲ್ಲಿರುವ ದೊಡ್ಡ ಆಲದ ಮರದ ಬಳಿ ನಡೆದ ಈ ಪ್ರತಿಭಟನೆಯಲ್ಲಿ ಪರಿಸರವಾದಿಗಳು ಮೆಟ್ರೋ ಮಾರ್ಗ ವಿನ್ಯಾಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಮುಖವಾಗಿ, ಮರ ಸಂಖ್ಯೆ 1683 ಎಂದು ಗುರುತಿಸಲಾದ ಸುಮಾರು 200 ವರ್ಷಗಳಿಗೂ ಅಧಿಕ ಇತಿಹಾಸವಿರುವ ಭವ್ಯವಾದ ‘ಹೆರಿಟೇಜ್’ ಮರವನ್ನು ಕಡಿಯಲು ಬಿಎಂಆರ್‌ಸಿಎಲ್ ಮುಂದಾಗಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮಾರ್ಗ ಬದಲಾವಣೆಗೆ ಆಗ್ರಹ:
ಪ್ರತಿಭಟನೆಯಲ್ಲಿ ಮಾತನಾಡಿದ ದತ್ತಾತ್ರೇಯ ದೇವರೆ ಅವರು, “ಮೆಟ್ರೋ 3ನೇ ಹಂತದ 90% ಭಾಗವು ಹೊಸ ಹೊರವರ್ತುಲ ರಸ್ತೆಯಲ್ಲಿ (New ORR) ಹಾದುಹೋಗುತ್ತದೆ. ಆದರೆ, ನಾಗರಭಾವಿ ಭಾಗದಲ್ಲಿ ಮಾತ್ರ ಉದ್ದೇಶಪೂರ್ವಕವಾಗಿ ಜನವಸತಿ ಮತ್ತು ಮರಗಳಿರುವ ಮಾರ್ಗವನ್ನು ಆಯ್ಕೆ ಮಾಡಲಾಗಿದೆ. ಈ ಭಾಗದಲ್ಲಿ ಮೆಟ್ರೋ ಲೈನ್ ಅನ್ನು 160 ಅಡಿ ಅಗಲದ ಹೊಸ ಹೊರವರ್ತುಲ ರಸ್ತೆಗೆ ಸ್ಥಳಾಂತರಿಸಿದರೆ ನೂರಾರು ಮರಗಳನ್ನು ಉಳಿಸಬಹುದು ಮತ್ತು ಜನರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದು” ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಬಿಎಂಆರ್‌ಸಿಎಲ್ ಸ್ಪಷ್ಟನೆ – ಯಶವಂತ್ ಚೌವ್ಹಾಣ್ ಹೇಳಿಕೆ:
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಯಶವಂತ್ ಚೌವ್ಹಾಣ್ ಅವರು, “ಮೆಟ್ರೋ ಮಾರ್ಗವು ರಸ್ತೆಯ ಮಧ್ಯಭಾಗದಲ್ಲಿ ಹಾದುಹೋಗುವುದರಿಂದ ಅಲೈನ್ಮೆಂಟ್ ಮತ್ತು ಸ್ಟೇಷನ್ ನಿರ್ಮಾಣಕ್ಕೆ ಮರಗಳ ತೆರವು ಅನಿವಾರ್ಯವಾಗುತ್ತದೆ. ಈ ಬಗ್ಗೆ ತಜ್ಞರ ಸಮಿತಿಯು (Expert Committee) ಸ್ಥಳ ಪರಿಶೀಲನೆ ನಡೆಸಲಿದೆ” ಎಂದು ತಿಳಿಸಿದರು. ಮರಗಳ ತೆರವಿನ ಮೊದಲು ವೈಜ್ಞಾನಿಕವಾಗಿ ಸ್ಟಡಿ ಮಾಡಲಾಗಿದ್ದು, ತಜ್ಞರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸಮರ್ಥಿಸಿಕೊಂಡರು.
ಮೆಟ್ರೋ ಫೇಸ್-3 ಕಾಮಗಾರಿ ಮಾಹಿತಿ:
ಯೋಜನೆಯ ವ್ಯಾಪ್ತಿ: ಸುಮಾರು 37.12 ಕಿಲೋಮೀಟರ್ ಉದ್ದದ ಡಬಲ್ ಡೆಕರ್ ಮೆಟ್ರೋ ಯೋಜನೆ ಇದಾಗಿದ.
ಒಟ್ಟು ಮರಗಳ ಸಂಖ್ಯೆ: ಮೂರನೇ ಹಂತದ ಒಟ್ಟು ಕಾಮಗಾರಿಗೆ 6,868 ಮರಗಳನ್ನು ಕಡಿಯಲು ಗುರುತಿಸಲಾಗಿದೆ.
ಜೆಪಿ ನಗರ ಭಾಗ: ಜೆಪಿ ನಗರದ ವ್ಯಾಪ್ತಿಯಲ್ಲೇ 1,092 ಮರಗಳ ತೆರವು ನಿಗದಿಯಾಗಿದ್ದು, ಅದರಲ್ಲಿ 406 ಮರಗಳನ್ನು ಸ್ಥಳಾಂತರಿಸಲು (Translocation) ಯೋಜಿಸಲಾಗಿದೆ.
ಕಾಮಗಾರಿ ಆರಂಭ: ಈ ಬೃಹತ್ ಯೋಜನೆ ಜೂನ್ ತಿಂಗಳಿನಿಂದ ಆರಂಭವಾಗುವ ನಿರೀಕ್ಷೆಯಿದೆ.
ಪರಿಸರವಾದಿಗಳು ಬಿಎಂಆರ್‌ಸಿಎಲ್ ಕೂಡಲೇ ಈ ಬಗ್ಗೆ ಮರುಚಿಂತನೆ ನಡೆಸಿ, ಹಳೆಯ ಮರಗಳನ್ನು ಮತ್ತು ನಾಗರಭಾವಿಯ ಹಸಿರನ್ನು ಉಳಿಸುವ ನಿಟ್ಟಿನಲ್ಲಿ ಮಾರ್ಗ ಬದಲಾವಣೆ (Re-alignment) ಮಾಡಬೇಕೆಂದು ಒತ್ತಾಯಿಸಿದ್ದಾರೆ. ಮೌನ ಪ್ರತಿಭಟನೆಯಲ್ಲಿ ನಾಗರಬಾವಿ ಸ್ವತ್ತಿನ ಮಾಲೀಕರ ಹಾಗೂ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.























