ನವದೆಹಲಿ, ಫೆ.26 www.bengaluruwire.com : ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮತ್ತು ಗೂಗಲ್ ಸಂಸ್ಥೆ ಭರ್ಜರಿ ಸಿಹಿಸುದ್ದಿ ನೀಡಿವೆ. ಇನ್ಮುಂದೆ ನಿಮ್ಮ ಹತ್ತಿರದ ಅಧಿಕೃತ ಆಧಾರ್ ಕೇಂದ್ರಗಳನ್ನು ಹುಡುಕಲು ಅಲೆದಾಡುವ ಅವಶ್ಯಕತೆಯಿಲ್ಲ. ಗೂಗಲ್ ಮ್ಯಾಪ್ಸ್‌ನಲ್ಲೇ (Google Maps) ಅಧಿಕೃತ ಆಧಾರ್ ಕೇಂದ್ರಗಳ ಮಾಹಿತಿ ನೀಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮತ್ತು ಗೂಗಲ್ ಕೈಜೋಡಿಸಿವೆ.
ಕೇವಲ ಸ್ಥಳದ ಮಾಹಿತಿ ಮಾತ್ರವಲ್ಲದೆ, ಆ ಕೇಂದ್ರದಲ್ಲಿ ಲಭ್ಯವಿರುವ ಸೇವೆಗಳ ಸಂಪೂರ್ಣ ವಿವರವೂ ಇಲ್ಲಿ ದೊರೆಯಲಿದೆ:
ಸೇವೆಯ ವಿವರ: ಹಿರಿಯರ ದಾಖಲಾತಿ, ಮಕ್ಕಳ ಆಧಾರ್, ವಿಳಾಸ ಬದಲಾವಣೆ ಅಥವಾ ಮೊಬೈಲ್ ಸಂಖ್ಯೆ ನವೀಕರಣದಂತಹ ಸೇವೆಗಳು ಲಭ್ಯವಿದೆಯೇ ಎಂಬ ಮಾಹಿತಿ ಸಿಗಲಿದೆ.
ಮೂಲಸೌಕರ್ಯ: ದಿವ್ಯಾಂಗ ಸ್ನೇಹಿ ವ್ಯವಸ್ಥೆ ಮತ್ತು ಪಾರ್ಕಿಂಗ್ ಸೌಲಭ್ಯಗಳಿವೆಯೇ ಎಂಬುದನ್ನು ಮೊದಲೇ ತಿಳಿಯಬಹುದು.

ಸಮಯದ ಮಾಹಿತಿ: ಆಧಾರ್ ಕೇಂದ್ರ ತೆರೆಯುವ ಮತ್ತು ಮುಚ್ಚುವ ನಿಖರ ಸಮಯ ಲಭ್ಯವಿರಲಿದೆ.
ತಪ್ಪು ಮಾಹಿತಿಗೆ ಬ್ರೇಕ್:
ದೇಶಾದ್ಯಂತ ಇರುವ ಸುಮಾರು 60,000ಕ್ಕೂ ಹೆಚ್ಚು ಆಧಾರ್ ಸೇವಾ ಕೇಂದ್ರಗಳ (ASKs) ನಿಖರ ಮಾಹಿತಿಯನ್ನು ಇದು ಒಳಗೊಂಡಿರಲಿದೆ. ಇದರಿಂದ ನಕಲಿ ಅಥವಾ ಅನಧಿಕೃತ ಕೇಂದ್ರಗಳಿಗೆ ಜನರು ಮೋಸ ಹೋಗುವುದನ್ನು ತಪ್ಪಿಸಬಹುದು. ಈ ಬಗ್ಗೆ ಮಾತನಾಡಿದ ಯುಐಡಿಎಐ ಸಿಇಒ ಭುವನೇಶ್ ಕುಮಾರ್, “ಈ ಸಹಯೋಗವು ನಾಗರಿಕರ ಜೀವನವನ್ನು ಸುಲಭಗೊಳಿಸಲಿದ್ದು, ಪಾರದರ್ಶಕತೆ ಹೆಚ್ಚಿಸಲಿದೆ,” ಎಂದಿದ್ದಾರೆ.
ನೇರ ಅಪಾಯಿಂಟ್ಮೆಂಟ್ ಬುಕಿಂಗ್ ಸಾಧ್ಯತೆ:
ಮುಂದಿನ ದಿನಗಳಲ್ಲಿ ಗೂಗಲ್ ಮ್ಯಾಪ್ಸ್ ಮೂಲಕವೇ ನೇರವಾಗಿ ಆಧಾರ್ ಕೇಂದ್ರಕ್ಕೆ ಭೇಟಿ ನೀಡಲು ‘ಅಪಾಯಿಂಟ್ಮೆಂಟ್ ಬುಕಿಂಗ್’ (Appointment Booking) ಮಾಡುವ ಸೌಲಭ್ಯವನ್ನೂ ಪರಿಚಯಿಸಲು ಉದ್ದೇಶಿಸಲಾಗಿದೆ. ಗೂಗಲ್ ಇಂಡಿಯಾದ ಕಾರ್ಯತಂತ್ರದ ಪಾಲುದಾರಿಕೆಯ ಮುಖ್ಯಸ್ಥೆ ರೋಲಿ ಅಗರ್ವಾಲ್ ಮಾತನಾಡಿ, “ಸರ್ಕಾರಿ ಸೇವೆಗಳು ಮತ್ತು ಜನರ ನಡುವಿನ ಅಂತರವನ್ನು ತಗ್ಗಿಸುವುದು ನಮ್ಮ ಉದ್ದೇಶ,” ಎಂದು ತಿಳಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಈ ಎಲ್ಲಾ ವಿಶೇಷ ವೈಶಿಷ್ಟ್ಯಗಳು ಬಳಕೆದಾರರಿಗೆ ಮುಕ್ತವಾಗಲಿವೆ.























