ಉದಯಪುರ, ಫೆ.26 www.bengaluruwire.com : ದಕ್ಷಿಣ ಭಾರತದ ಖ್ಯಾತ ನಟ, ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಹಾಗೂ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಅವರು ಇಂದು ರಾಜಸ್ಥಾನದ ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕಳೆದ ಹಲವು ವರ್ಷಗಳಿಂದ ಹರಿದಾಡುತ್ತಿದ್ದ ಪ್ರೇಮ ವದಂತಿಗಳಿಗೆ ಇಂದು ಅಧಿಕೃತವಾಗಿ ತೆರೆ ಬಿದ್ದಿದ್ದು, ಈ ಜೋಡಿ ಅದ್ದೂರಿ ಹಾಗೂ ಅಷ್ಟೇ ಖಾಸಗಿಯಾಗಿ ದಾಂಪತ್ಯಕ್ಕೆ ಹೆಜ್ಜೆಯಿಟ್ಟಿದೆ.
ಅರಾವಳಿ ಬೆಟ್ಟಗಳ ಮಡಿಲಲ್ಲಿ ಅದ್ಧೂರಿ ಸಂಭ್ರಮ:
ಉದಯಪುರ ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಅರಾವಳಿ ಬೆಟ್ಟಗಳ ಸಾಲಿನಲ್ಲಿರುವ ಐಷಾರಾಮಿ ‘ಐಟಿಸಿ ಗ್ರಾಂಡ್ ಮೆಮೆಂಟೋಸ್’ ರೆಸಾರ್ಟ್ ಈ ಮಹಾನ್ ಮಿಲನಕ್ಕೆ ಸಾಕ್ಷಿಯಾಯಿತು.


ಫೆಬ್ರವರಿ 24 ರಿಂದಲೇ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಗಳು ಆರಂಭವಾಗಿದ್ದು, ಕ್ರಿಕೆಟ್ ಪಂದ್ಯ, ಪೂಲ್ ವಾಲಿಬಾಲ್‌ನಂತಹ ವಿಭಿನ್ನ ಆಟಗಳೊಂದಿಗೆ ಸಂಭ್ರಮ ಮುಗಿಲು ಮುಟ್ಟಿತ್ತು. ಫೆಬ್ರವರಿ 25 ರಂದು ಹಳದಿ ಮತ್ತು ಮೆಹೆಂದಿ ಶಾಸ್ತ್ರಗಳು ನಡೆದಿದ್ದು, ಸಂಗೀತ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ತಾಯಿ ಮಾಧವಿ ಅವರು ರಶ್ಮಿಕಾಗೆ ತಮ್ಮ ಕುಟುಂಬದ ಪರಂಪರೆಯ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ಮದುವೆ:
ಇಂದು (ಫೆಬ್ರವರಿ 26) ನಡೆದ ವಿವಾಹ ಮಹೋತ್ಸವವು ಎರಡು ವಿಭಿನ್ನ ಸಂಪ್ರದಾಯಗಳಲ್ಲಿ ಜರುಗುತ್ತಿದೆ. ಬೆಳಗ್ಗೆ ವಿಜಯ್ ಅವರ ಕುಟುಂಬದ ಸಂಪ್ರದಾಯದಂತೆ ತೆಲುಗು ಹಿಂದೂ ಪದ್ಧತಿಯಲ್ಲಿ ವಿವಾಹ ನಡೆಯುತ್ತಿದೆ. ಸಂಜೆ ರಶ್ಮಿಕಾ ಅವರ ಮೂಲ ಕೊಡವ ಸಂಪ್ರದಾಯದ ವಿಧಿವಿಧಾನಗಳು ಜರುಗಲಿವೆ. ಅಭಿಮಾನಿಗಳು ಪ್ರೀತಿಯಿಂದ ಕರೆದ ‘ವಿರೋಶ್’ (Virosh) ಹೆಸರನ್ನೇ ತಮ್ಮ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಶ್’ ಎಂದು ಈ ದಂಪತಿಗಳು ನಾಮಕರಣ ಮಾಡಿದ್ದಾರೆ.

ಗಣ್ಯರ ಗೈರು, ಖಾಸಗಿತನಕ್ಕೆ ಆದ್ಯತೆ:
ಈ ವಿವಾಹವು ಅತ್ಯಂತ ಖಾಸಗಿಯಾಗಿ ನಡೆಯುತ್ತಿದ್ದು, ಕೇವಲ 50 ರಷ್ಟು ಆಪ್ತ ಬಂಧುಗಳು ಮತ್ತು ಮಿತ್ರರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಚಿತ್ರರಂಗದ ಸಹೋದ್ಯೋಗಿಗಳಿಗೆ ಈ ಸಮಾರಂಭದಲ್ಲಿ ಅವಕಾಶ ನೀಡಿಲ್ಲ ಎನ್ನಲಾಗಿದೆ. ಆದರೆ, ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಜೋಡಿಗೆ ಶುಭ ಹಾರೈಸಿ ಸಂದೇಶ ಕಳುಹಿಸಿದ್ದಾರೆ ಎಂಬ ಸುದ್ದಿಯು ವೈರಲ್ ಆಗಿದೆ.
ಅಭಿಮಾನಿಯೊಬ್ಬರು X ನಲ್ಲಿ ಹೃತ್ಪೂರ್ವಕ ಶುಭಾಶಯಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಸಂದೇಶದಲ್ಲಿ, “ಅಂತಿಮವಾಗಿ ಬಹುನಿರೀಕ್ಷಿತ ದಿನ 26-02-2026 ಬಂದಿದೆ @iamRashmika ಮತ್ತು @TheDeverakonda ಅವರಿಗೆ ಅಂತ್ಯವಿಲ್ಲದ ಪ್ರೀತಿ, ಸಂತೋಷ ಮತ್ತು ಸುಂದರವಾದ ಆಶೀರ್ವಾದಗಳನ್ನು ಕಳುಹಿಸುತ್ತಿದ್ದೇನೆ. ಈ ಹೊಸ ಪ್ರಯಾಣವು ನಗು, ತಿಳುವಳಿಕೆ, ಯಶಸ್ಸು ಮತ್ತು ಶಾಶ್ವತವಾಗಿ ಒಗ್ಗಟ್ಟಿನಿಂದ ತುಂಬಿರಲಿ. theweddingofvirosh virosh.”
ಒಟ್ಟಾರೆ, ‘ಗೀತಾ ಗೋವಿಂದಂ’ ಚಿತ್ರದಲ್ಲಿ ಮೋಡಿ ಮಾಡಿದ್ದ ಈ ಜೋಡಿ, ಇದೀಗ ನಿಜ ಜೀವನದ ‘ಪತಿ-ಪತ್ನಿ’ಯಾಗಿ ಹೊಸ ಹಾದಿ ತುಳಿಯುತ್ತಿರುವುದು ಅಭಿಮಾನಿಗಳಲ್ಲಿ ಸಡಗರ ತಂದಿದೆ.























