ಬೆಂಗಳೂರು, ಫೆ.25 www.bengaluruwire.com : ದಾನಗಳಲ್ಲಿ ಶ್ರೇಷ್ಠವಾದ ಅಂಗಾಂಗ ದಾನದ ಮೂಲಕ ಮಂಡ್ಯದ ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್‌ನಲ್ಲಿ ನಡೆದ ಯಶಸ್ವಿ ಅಂಗಾಂಗ ಕಸಿ ಪ್ರಕ್ರಿಯೆಯಿಂದಾಗಿ ಆರು ಜನರ ಬಾಳಿಗೆ ಹೊಸ ಬೆಳಕು ಸಿಕ್ಕಂತಾಗಿದೆ.
ಘಟನೆಯ ಹಿನ್ನೆಲೆ:
ಮಂಡ್ಯದ ಕಸಬಾ ಹೋಬಳಿಯ ಚಿಕ್ಕಮಂಡ್ಯ ಗ್ರಾಮದ ದರ್ಶನ್ ಎಂಬ ಯುವಕ ಕಳೆದ ಫೆಬ್ರವರಿ 22 ರಂದು ಬೈಕ್ ಅಪಘಾತಕ್ಕೆ ಒಳಗಾಗಿದ್ದ. ತಲೆಗೆ ಪೆಟ್ಟಾಗಿದ್ದರೂ ಸಾಮಾನ್ಯವೆಂದು ಭಾವಿಸಿ ಅಂದು ರಾತ್ರಿ ಮಲಗಿದ್ದ ಯುವಕನ ಸ್ಥಿತಿ ಗಂಭೀರವಾದಾಗ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆಯಲ್ಲಿ ತಲೆಯೊಳಗೆ ತೀವ್ರ ರಕ್ತಸ್ರಾವವಾಗಿರುವುದು ಪತ್ತೆಯಾಯಿತು.
ವೈದ್ಯರ ಹೋರಾಟ ಮತ್ತು ಮಿದುಳು ಸಾವು:
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ದರ್ಶನ್ ಸ್ಪಂದಿಸಲಿಲ್ಲ. ಎರಡು ದಿನಗಳ ಸತತ ಪ್ರಯತ್ನದ ನಂತರ, ವೈದ್ಯರ ತಂಡ ಯುವಕ “ಮಿದುಳು ಸಾವು” (Brain Dead) ಸಂಭವಿಸಿರುವುದಾಗಿ ಅಧಿಕೃತವಾಗಿ ಘೋಷಿಸಿತು.
ಕುಟುಂಬದ ಶ್ರೇಷ್ಠ ನಿರ್ಧಾರ:
ಮಗನನ್ನು ಕಳೆದುಕೊಂಡ ದುಃಖದ ಬೆನ್ನಲ್ಲೇ, ಆತನ ಅಂಗಾಂಗಗಳು ಇತರರ ಪ್ರಾಣ ಉಳಿಸಲಿ ಎಂಬ ಉದಾತ್ತ ಉದ್ದೇಶದಿಂದ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಸಮ್ಮತಿಸಿದರು. ‘ಜೀವಸಾರ್ಥಕತೆ’ ತಂಡದ ಸಮಾಲೋಚನೆಯ ನಂತರ, ದರ್ಶನ್ ಅವರ ಯಕೃತ್ತು, ಮೂತ್ರಪಿಂಡಗಳು, ಹೃದಯ ನಾಳಗಳು ಸೇರಿದಂತೆ ಪ್ರಮುಖ ಅಂಗಗಳನ್ನು ಪಡೆದು ಅರ್ಹ ರೋಗಿಗಳಿಗೆ ಯಶಸ್ವಿಯಾಗಿ ಅಳವಡಿಸಲಾಯಿತು.
“ನೋವಿನ ಈ ಸಂದರ್ಭದಲ್ಲಿಯೂ ಸಮಾಜಸೇವೆಗೆ ಮುಂದಾದ ಕುಟುಂಬದ ನಿರ್ಧಾರ ನಿಜಕ್ಕೂ ಶ್ಲಾಘನೀಯ. ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಈ ಸಂಕೀರ್ಣ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲಾಗಿದೆ.” – ಡಾ. ದೀಪಕ್, ಮೆಡಿಕಲ್ ಸೂಪರಿಟೆಂಡೆಂಟ್
ಈ ಯಶಸ್ವಿ ಕಾರ್ಯದಲ್ಲಿ ಟ್ರಾಮಾ ಕೇರ್ ಸೆಂಟರ್‌ನ ವಿಶೇಷ ಅಧಿಕಾರಿ ಡಾ. ಅಸೀಮಾ ಬಾನು, ಡಾ.ಕಾವ್ಯಾ ಹಾಗೂ ಬಿಎಂಸಿಆರ್ ಐ (BMCRI) ವೈದ್ಯರ ತಂಡದ ಶ್ರಮವಿದೆ.






















