ಬೆಂಗಳೂರು, ಫೆ.24 www.bengaluruwire.com : ಕೆಇಎ ನಡೆಸುವ ಸಿಇಟಿ-2026 (CET-2026) ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ.
ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನಿಗದಿತ ದಿನಾಂಕದ ನಂತರವೂ ಎಡಿಟಿಂಗ್ (Editing) ಮಾಡಲು ಪ್ರಾಧಿಕಾರವು ವಿಶೇಷ ಅವಕಾಶ ಕಲ್ಪಿಸಿದೆ.
ಪ್ರಾಧಿಕಾರದ ಪ್ರಕಟಣೆಯ ಪ್ರಕಾರ, ಸಿಇಟಿ-2026ಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರುವವರು ತಮ್ಮ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ತಪ್ಪುಗಳಿದ್ದಲ್ಲಿ ಲಾಗಿನ್ ಆಗಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ, ಹೊಸದಾಗಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ವಿಶೇಷ ಸೂಚನೆ:

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ತಮ್ಮ ಜಾತಿ ಪ್ರಮಾಣ ಪತ್ರದಲ್ಲಿ ‘ಒಳಮೀಸಲಾತಿ’ ವಿವರಗಳಾದ (ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ) ಮುದ್ರಿತವಾಗಿರುವ ಹೊಸ ‘ಆರ್‌ಡಿ (RD)’ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಅನೇಕ ಅಭ್ಯರ್ಥಿಗಳು ಹಳೆಯ ಆರ್‌ಡಿ ಸಂಖ್ಯೆಯನ್ನೇ ನಮೂದಿಸುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದ್ದು, ಇದನ್ನು ಸರಿಪಡಿಸಿಕೊಳ್ಳಲು ಮಾರ್ಚ್ 30, 2026 ರವರೆಗೆ ಗಡುವು ನೀಡಲಾಗಿದೆ.
ಸಂಬಂಧಪಟ್ಟ ತಹಶೀಲ್ದಾರರಿಂದ ಹೊಸ ಪ್ರಮಾಣ ಪತ್ರ ಪಡೆದು, ಎಡಿಟಿಂಗ್ ಪೋರ್ಟಲ್ ಮೂಲಕ ಆರ್‌ಡಿ ಸಂಖ್ಯೆಯನ್ನು ಅಪ್‌ಡೇಟ್ ಮಾಡುವಂತೆ ಸೂಚಿಸಲಾಗಿದೆ. ಈ ಮಾಹಿತಿ ದಾಖಲಿಸಿದವರನ್ನು ಮಾತ್ರ ಆಯಾ ವರ್ಗದ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಕೆಇಎ ತಿಳಿಸಿದೆ.























