ಬೆಂಗಳೂರು, ಫೆ.24 www.bengaluruwire.com : ರಾಜ್ಯದ ರೈತರು ಮತ್ತು ಸಾರ್ವಜನಿಕರು ಇನ್ಮುಂದೆ ಜಮೀನಿನ ಖಾತೆ ಬದಲಾವಣೆ (ಮ್ಯುಟೇಷನ್) ಮಾಡಿಸಲು ಕಂದಾಯ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.
ಕಂದಾಯ ಇಲಾಖೆಯನ್ನು ಸಂಪೂರ್ಣ ಜನಪರಗೊಳಿಸುವ ನಿಟ್ಟಿನಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ವಿಕಾಸಸೌಧದಲ್ಲಿ ‘ಸ್ವಯಂ ಚಾಲಿತ ಮ್ಯುಟೇಷನ್’ (Automated Mutation) ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಏನಿದು ಹೊಸ ವ್ಯವಸ್ಥೆ?:
ಈ ಹೊಸ ತಂತ್ರಜ್ಞಾನದ ಅಡಿಯಲ್ಲಿ, ಶೇ. 98ರಷ್ಟು ಖಾತೆ ಬದಲಾವಣೆಗಳು ಯಾವುದೇ ಅಧಿಕಾರಿಗಳ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿ ನಡೆಯಲಿವೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಆಕ್ಷೇಪಣೆ ಇಲ್ಲದಿದ್ದಲ್ಲಿ ಕೇವಲ 7 ರಿಂದ 15 ದಿನಗಳಲ್ಲಿ ಖಾತೆ ಬದಲಾವಣೆಯಾಗಲಿದೆ.

ಸಚಿವರು ಹೇಳಿದ್ದೇನು?:
“ಕಳೆದ ಎರಡೂವರೆ ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಹಂತಹಂತವಾಗಿ ಸುಧಾರಣೆ ತರಲಾಗುತ್ತಿದೆ. ಈ ಹಿಂದೆ ಅಧಿಕಾರಿಗಳ ವಿಳಂಬ ಧೋರಣೆ ಮತ್ತು ಮಧ್ಯವರ್ತಿಗಳ ಹಾವಳಿಯಿಂದ ಜನರು ಶೋಷಣೆಗೆ ಒಳಗಾಗುತ್ತಿದ್ದರು. ಈಗ ಭೂಮಿ ತಂತ್ರಾಂಶದ ಮೂಲಕ ಈ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಮಂಡ್ಯದಲ್ಲಿ ಜಾರಿಗೆ ತರಲಾಗಿದ್ದು, ಯಶಸ್ವಿಯಾದ ಬೆನ್ನಲ್ಲೇ ಈಗ ರಾಜ್ಯಾದ್ಯಂತ ವಿಸ್ತರಿಸಲಾಗುತ್ತಿದೆ,” ಎಂದು ಸಚಿವರು ವಿವರಿಸಿದರು.
ಆಧಾರ್ ಜೋಡಣೆಗೆ ಕರೆ:
ನಿಮ್ಮ ಆಸ್ತಿಯ ಸುರಕ್ಷತೆಗಾಗಿ ಪಹಣಿಯೊಂದಿಗೆ (RTC) ಆಧಾರ್ ಜೋಡಣೆ ಮಾಡುವುದು ಅನಿವಾರ್ಯ. ಆಧಾರ್ ಲಿಂಕ್ ಆಗಿದ್ದರೆ, ನಿಮ್ಮ ಜಮೀನಿನ ದಾಖಲೆಗಳಲ್ಲಿ ಯಾವುದೇ ಬದಲಾವಣೆಯಾದರೂ ತಕ್ಷಣವೇ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಮಾಹಿತಿ ಬರಲಿದೆ. ಇದರಿಂದ ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸುವುದನ್ನು ತಡೆಯಬಹುದು ಎಂದು ಸಚಿವರು ತಿಳಿಸಿದರು.






















