ಬೆಂಗಳೂರು, ಫೆ.24 www.bengaluruwire.com :ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆ ನಿವಾರಣೆ ಮತ್ತು ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿರುಸಿನ ಕ್ರಮ ಕೈಗೊಂಡಿದೆ.
ಬಾಣಸವಾಡಿ ಮುಖ್ಯ ರಸ್ತೆಯ ಐಒಸಿ ಜಂಕ್ಷನ್‌ನಲ್ಲಿ ಅತ್ಯಾಧುನಿಕ ‘ಎಲಿವೇಟೆಡ್ ರೋಟರಿ ಮೇಲ್ಸೇತುವೆ’ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದರೆ, ಇತ್ತ ತೆರಿಗೆ ವಂಚಿಸಿದ 13,600 ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ಪ್ರಾಧಿಕಾರ ಬಿಸಿ ಮುಟ್ಟಿಸಿದೆ.
ಸಂಚಾರ ದಟ್ಟಣೆಗೆ ಮುಕ್ತಿ: 3 ಕಿ.ಮೀ ಉದ್ದದ ರೋಟರಿ ಮೇಲ್ಸೇತುವೆ:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಬಿ-ಸ್ಮೈಲ್ ಹಾಗೂ ಕೆ-ರೈಡ್ ಅಧಿಕಾರಿಗಳೊಂದಿಗೆ ಐಒಸಿ ಜಂಕ್ಷನ್‌ನಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಿದರು.

ಸುಮಾರು 380 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿರುವ ಈ ಯೋಜನೆಯು ಮಾರುತಿ ಸೇವಾನಗರ, ಬಾಣಸವಾಡಿ ಮತ್ತು ಕಮ್ಮನಹಳ್ಳಿ ನಿವಾಸಿಗಳಿಗೆ ವರದಾನವಾಗಲಿದೆ.
ಈ ಯೋಜನೆಯಡಿ 3 ಕಿ.ಮೀ ಉದ್ದದ ರೋಟರಿ ಮೇಲ್ಸೇತುವೆ ಮಾತ್ರವಲ್ಲದೆ, ಬೈಯ್ಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಹೆಚ್ಚುವರಿ 2-ಲೇನ್ ರೈಲ್ವೆ ಓವರ್‌ಬ್ರಿಜ್ ಕೂಡ ನಿರ್ಮಾಣವಾಗಲಿದೆ. ಸದ್ಯ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ.
ಈ ಜಂಟಿ ಪರಿಶೀಲನೆಯಲ್ಲಿ ತಾಂತ್ರಿಕ ನಿರ್ದೇಶಕರಾದ ಡಾ. ಬಿ.ಎಸ್. ಪ್ರಹ್ಲಾದ್ ಹಾಗೂ ಕೆ-ರೈಡ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ತೆರಿಗೆ ವಂಚಕರಿಗೆ ಜಿಪಿಎಸ್ ಬಲೆ: 688 ಕೋಟಿ ರೂ. ವಸೂಲಾತಿ ಗುರಿ:
ಇನ್ನೊಂದೆಡೆ, ಆಸ್ತಿ ತೆರಿಗೆ ಮರುಪರಿಶೀಲನೆಯ 2ನೇ ಹಂತದಲ್ಲಿ ಪ್ರಾಧಿಕಾರವು ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಸಹಯೋಗದೊಂದಿಗೆ ನಡೆಸಿದ ಜಿಪಿಎಸ್ ಆಧಾರಿತ ಮನೆ-ಮನೆ ಭೇಟಿ ಅಭಿಯಾನದಲ್ಲಿ 13,600 ಆಸ್ತಿ ಮಾಲೀಕರು ಕಡಿಮೆ ತೆರಿಗೆ ಪಾವತಿಸಿರುವುದು ಪತ್ತೆಯಾಗಿದೆ.
ಕಂದಾಯ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 318 ಕೋಟಿ ರೂ. ಗಳ ತೆರಿಗೆ ಬಾಕಿ ಪತ್ತೆಯಾಗಿದೆ. ಮೊದಲ ಹಂತವನ್ನೂ ಸೇರಿಸಿದರೆ ಒಟ್ಟು 23,600 ಆಸ್ತಿಗಳಿಂದ 688 ಕೋಟಿ ರೂ. ವಸೂಲಿ ಮಾಡಲು ಪ್ರಾಧಿಕಾರ ಸಜ್ಜಾಗಿದೆ. ಡ್ರೋನ್ ಚಿತ್ರಗಳು ಮತ್ತು ಡಿಜಿಟಲ್ ತಂತ್ರಜ್ಞಾನ ಬಳಸಿ ವಿಸ್ತೀರ್ಣವನ್ನು ಅಳೆಯಲಾಗಿದ್ದು, ತಪ್ಪು ಮಾಹಿತಿ ನೀಡಿದವರಿಗೆ ಸ್ವಯಂಚಾಲಿತವಾಗಿ ಶೋಕಾಸ್ ನೋಟಿಸ್ ರವಾನೆಯಾಗುತ್ತಿದೆ.























