ಬೆಂಗಳೂರು, ಫೆ.23 www.bengaluruwire.com: ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ದುರುಪಯೋಗ ತಡೆಗಟ್ಟಲು ಈ ಕ್ರಮ ಅನಿವಾರ್ಯವಾಗುತ್ತಿದೆ ಎಂದರು.
ಮೊಬೈಲ್ ಹಾವಳಿಗೆ ಬೀಳಲಿದೆಯೇ ಬ್ರೇಕ್?:
ಶಾಲೆಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ವಿಚಾರದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗಳಾಗುತ್ತಿವೆ ಎಂದು ಉಲ್ಲೇಖಿಸಿದ ಡಿಸಿಎಂ, “ಅನೇಕ ದೇಶಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ನಮ್ಮ ರಾಜ್ಯದಲ್ಲೂ ಪೋಷಕರಿಂದ ಈ ಬಗ್ಗೆ ತೀವ್ರ ಒತ್ತಡ ಕೇಳಿಬರುತ್ತಿದೆ. ಮಕ್ಕಳಿಂದ ಮೊಬೈಲ್ ಫೋನ್‌ಗಳು ಯಾವ ರೀತಿ ದುರುಪಯೋಗವಾಗುತ್ತಿವೆ ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ, ಈ ಬಗ್ಗೆ ಸೂಕ್ತ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಕೆರೆ ನೀರು ಕೇವಲ ಅಂತರ್ಜಲ ವೃದ್ಧಿಗೆ ಮಾತ್ರ:
ರಾಷ್ಟ್ರೀಯ ನೀರು ಗುಣಮಟ್ಟ ಪ್ರಮಾಣಿತ ಸಂಸ್ಥೆಯ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ಕೆರೆಗಳ ನೀರು ಕುಡಿಯಲು ಅಥವಾ ಸ್ನಾನ ಮಾಡಲು ಯೋಗ್ಯವಲ್ಲ ಎಂಬ ವಾದವನ್ನು ಒಪ್ಪಿಕೊಂಡರು. “ಬೆಂಗಳೂರಿನ ಕೆರೆ ನೀರನ್ನು ಕುಡಿಯಿರಿ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ. ಈ ಕೆರೆಗಳ ಮುಖ್ಯ ಉದ್ದೇಶ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಮಾತ್ರ. ತಿಪ್ಪಗೊಂಡನಹಳ್ಳಿ ಕೆರೆಯ ನೀರನ್ನು ಬಿಡ್ಬ್ಯೂ ಎಸ್ ಎಸ್ ಬಿ ಮೂಲಕ ಶುದ್ಧೀಕರಿಸಲಾಗುತ್ತಿದೆ. ಆದರೆ ಉಳಿದ ಕೆರೆಗಳ ನೀರು ದೈನಂದಿನ ಬಳಕೆಗೆ ಸೂಕ್ತವಲ್ಲ,” ಎಂದರು.
ನರೇಗಾ ವಿಚಾರ: ಕೇಂದ್ರದ ವಿರುದ್ಧ ಕಿಡಿ:
ವಿಬಿ ಗ್ರಾಮ್ ಜೀ ಮತ್ತು ನರೇಗಾ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಗ್ರಾಮೀಣ ಕೂಲಿ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು. “ಹಿಂದೆ ಕೆಲಸ ಮಾಡಿದವರಿಗೂ ಹಣ ಬಿಡುಗಡೆಯಾಗಿಲ್ಲ. ಕಾಯ್ದೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಿ ಬಡವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ಚಿಕ್ಕಬಳ್ಳಾಪುರದಲ್ಲಿ ‘ನರೇಗಾ ಬಚಾವ್ ಆಂದೋಲನ’ ಹಮ್ಮಿಕೊಳ್ಳಲಾಗುತ್ತಿದೆ,” ಎಂದು ಮಾಹಿತಿ ನೀಡಿದರು.























