ಬೆಂಗಳೂರು, ಫೆ.21 www.bengaluruwire.com : ಮಹಾಯೋಜನೆ (Master Plan) ವ್ಯಾಪ್ತಿಗೆ ಒಳಪಡುವ ಜಮೀನುಗಳ ವಿನ್ಯಾಸ (Layout Plan) ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರವು ಮಹತ್ವದ ನಿರ್ದೇಶನಗಳನ್ನು ನೀಡಿದೆ.
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಕಾಯ್ದೆ 1964 ರ ಕಲಂ 95 ಕ್ಕೆ ತರಲಾದ ತಿದ್ದುಪಡಿಯ ಅನ್ವಯ, ಇನ್ನು ಮುಂದೆ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿನ ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಜಿಲ್ಲಾಧಿಕಾರಿಗಳಿಂದ ಪ್ರತ್ಯೇಕ ಭೂ ಪರಿವರ್ತನೆ (Land Conversion) ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ.
ಸ್ವಯಂ ಘೋಷಣೆಯೊಂದಿಗೆ ಅನುಮೋದನೆ:
ಸರ್ಕಾರದ ಹೊಸ ನಿಯಮದಂತೆ, ಅರ್ಜಿದಾರರು ವಿನ್ಯಾಸ ನಕ್ಷೆ ಅನುಮೋದನೆಗಾಗಿ ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳೊಂದಿಗೆ ಕರ್ನಾಟಕ ಭೂ ಕಂದಾಯ ನಿಯಮ 106(C) ರ ಅಡಿಯಲ್ಲಿ ನಿಗದಿಪಡಿಸಿದ ‘ನಮೂನೆ-21B’ ರಂತೆ ಪ್ರಮಾಣ ಪತ್ರವನ್ನು (Affidavit) ಕಡ್ಡಾಯವಾಗಿ ಸಲ್ಲಿಸಬೇಕು. ಭೂ ಉಪಯೋಗ ಬದಲಾವಣೆಗೆ ಸಂಬಂಧಿಸಿದಂತೆ ಸ್ವಯಂ ಘೋಷಣೆ ಮಾಡಿಕೊಳ್ಳುವ ಅವಕಾಶವನ್ನು ಅರ್ಜಿದಾರರಿಗೆ ನೀಡಲಾಗಿದೆ.

ಶುಲ್ಕ ಪಾವತಿ ಕಡ್ಡಾಯ:
ವಿನ್ಯಾಸ ಅನುಮೋದನೆ ನೀಡುವ ಮೊದಲು ಯೋಜನಾ ಪ್ರಾಧಿಕಾರಗಳು ಕೆ.ಟಿ.ಸಿ.ಪಿ ಕಾಯ್ದೆಯಡಿ ವಿಧಿಸುವ ವಿವಿಧ ಶುಲ್ಕಗಳ ಜೊತೆಗೆ, ಕಂದಾಯ ಕಾಯ್ದೆಯ ಕಲಂ 95(7) ರ ಅನ್ವಯ ಕಂದಾಯ ಇಲಾಖೆಗೆ ಪಾವತಿಸಬೇಕಾದ ನಿಗದಿತ ಶುಲ್ಕವನ್ನು ನಮೂದಿಸಬೇಕು. ಈ ಮೊತ್ತವನ್ನು ಪ್ರಾಧಿಕಾರವು ಪ್ರತ್ಯೇಕ ಖಾತೆಯಲ್ಲಿ ಸಂಗ್ರಹಿಸಿ ನಂತರ ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು.
ಕಟ್ಟುನಿಟ್ಟಿನ ನಿಯಮಗಳು:
* ಕೇವಲ ಭೂ ಪರಿವರ್ತನೆಗಾಗಿ ಸಲ್ಲಿಸುವ ಅರ್ಜಿಗಳನ್ನು ಪ್ರಾಧಿಕಾರಗಳು ಸ್ವೀಕರಿಸಬಾರದು. ವಿನ್ಯಾಸ ನಕ್ಷೆ ಅನುಮೋದನೆಗಾಗಿ ಮಾತ್ರ ಸಲ್ಲಿಕೆಯಾದ ಅರ್ಜಿಯನ್ನು ಸ್ವೀಕರಿಸಬೇಕು.
* ಅರ್ಜಿದಾರರು ನೀಡುವ ದಾಖಲೆಗಳು ಅಥವಾ ಅಫಿಡವಿಟ್ ತಪ್ಪಾಗಿದ್ದಲ್ಲಿ, ಯಾವುದೇ ಮುನ್ಸೂಚನೆ ನೀಡದೆ ನೀಡಲಾದ ಅನುಮೋದನೆಯನ್ನು ರದ್ದುಪಡಿಸಲಾಗುವುದು.
* ತಪ್ಪಾದ ಮಾಹಿತಿಗೆ ಜಮೀನಿನ ಮಾಲೀಕರೇ ಹೊಣೆಗಾರರಾಗಿರುತ್ತಾರೆ, ಪ್ರಾಧಿಕಾರವಲ್ಲ ಎಂಬ ಷರತ್ತನ್ನು ಅನುಮೋದನೆ ಪತ್ರದಲ್ಲಿ ನಮೂದಿಸಬೇಕು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಬಿಎಂಆರ್‌ಡಿಎ (BMRDA) ಸೇರಿದಂತೆ ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಯೋಜನಾ ಪ್ರಾಧಿಕಾರಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಫೆ.18ರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.























