ಬೆಂಗಳೂರು/ಲಂಡನ್, ಫೆ.20, www.bengaluruwire.com :ಸಿಲಿಕಾನ್ ಸಿಟಿ ಬೆಂಗಳೂರಿನ ನೀರಿನ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಯಶಸ್ವಿಯಾಗಿರುವ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರಿಗೆ ಈಗ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಮನ್ನಣೆ ದೊರೆತಿದೆ.
ಲಂಡನ್ ಮೂಲದ ಜಾಗತಿಕ ಸಂಸ್ಥೆಯಾದ ‘ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್’ (SWAN) ಪ್ರಕಟಿಸಿರುವ ತನ್ನ 5ನೇ ‘ಹಿರಿಯ ಯುಟಿಲಿಟಿ ಸಲಹಾ ಸಮಿತಿ’ಗೆ (Utility Advisory Group – UAG) ಭಾರತದ ಏಕೈಕ ಪ್ರತಿನಿಧಿಯಾಗಿ ಅವರು ಆಯ್ಕೆಯಾಗಿದ್ದಾರೆ.
ಜಾಗತಿಕ ತಜ್ಞರ ತಂಡದಲ್ಲಿ ಭಾರತದ ಧ್ವನಿ:
ಈ ಪ್ರತಿಷ್ಠಿತ ಸಮಿತಿಯಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಪೋರ್ಚುಗಲ್ ಮತ್ತು ಬ್ರೆಜಿಲ್ ದೇಶಗಳ ಜಲ ನಿರ್ವಹಣಾ ತಜ್ಞರಿದ್ದು, ಅವರ ಸಾಲಿನಲ್ಲಿ ಭಾರತದ ಪರವಾಗಿ ಡಾ. ಮನೋಹರ್ ಸ್ಥಾನ ಪಡೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಎದುರಾಗುತ್ತಿರುವ ನೀರಿನ ಸವಾಲುಗಳು, ಸ್ಮಾರ್ಟ್ ತಂತ್ರಜ್ಞಾನದ ಬಳಕೆ ಮತ್ತು ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಈ ಸಮಿತಿ ಪ್ರಮುಖ ಪಾತ್ರ ವಹಿಸಲಿದೆ.

ಎಐ ಮತ್ತು ದತ್ತಾಂಶ ಆಧಾರಿತ ಕ್ರಾಂತಿಗೆ ಸಂದ ಜಯ:
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಜಲಮಂಡಳಿಯಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ದತ್ತಾಂಶ-ಆಧಾರಿತ (Data-driven) ಉಪಕ್ರಮಗಳನ್ನು ಜಾರಿಗೆ ತಂದಿದ್ದಕ್ಕಾಗಿ ಈ ಗೌರವ ಲಭಿಸಿದೆ. ಜೂನ್ 2026ರಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿರುವ ‘ಸ್ವಾನ್ 16ನೇ ವಾರ್ಷಿಕ ಸಮ್ಮೇಳನ’ಕ್ಕೆ ಇವರು ಕಾರ್ಯತಂತ್ರದ ಸಲಹೆಗಳನ್ನು ನೀಡಲಿದ್ದಾರೆ.
ಬ್ರಾಂಡ್ ಬೆಂಗಳೂರು ಕನಸಿಗೆ ಬಲ:
ತಮ್ಮ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಡಾ. ರಾಮ್ ಪ್ರಸಾತ್ ಮನೋಹರ್, “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ‘ಬ್ರಾಂಡ್ ಬೆಂಗಳೂರು’ ಕನಸಿನ ಭಾಗವಾಗಿ ನಾವು ತಂತ್ರಜ್ಞಾನಕ್ಕೆ ಒತ್ತು ನೀಡಿದ್ದೇವೆ. ಈ ಮೈಲಿಗಲ್ಲನ್ನು ನಾನು ಜಲಮಂಡಳಿಯ ಸಮಸ್ತ ತಾಂತ್ರಿಕ ತಂಡಕ್ಕೆ ಅರ್ಪಿಸುತ್ತೇನೆ,” ಎಂದು ತಿಳಿಸಿದ್ದಾರೆ.























