ಬೆಂಗಳೂರು, ಫೆ.19 www.bengaluruwire.com : ಕರ್ತವ್ಯ ನಿರತರಾಗಿದ್ದಾಗ ಅನಿರೀಕ್ಷಿತ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಬೆಸ್ಕಾಂನ (BESCOM) ಮೂವರು ಸಿಬ್ಬಂದಿಯ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಇಂಧನ ಇಲಾಖೆ ಭರವಸೆಯ ಆಸರೆಯಾಗಿ ನಿಂತಿದೆ.
ಮೃತ ಸಿಬ್ಬಂದಿಯ ಕುಟುಂಬದವರಿಗೆ ತಲಾ 1 ಕೋಟಿ ರೂಪಾಯಿಗಳ ಪರಿಹಾರದ ಚೆಕ್ ಅನ್ನು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಬುಧವಾರ ವಿತರಿಸಿದರು.
ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದ ಸಚಿವರು, ಅವರಿಗೆ ಸಾಂತ್ವನ ಹೇಳಿ ವಿಮಾ ಸಹಾಯಧನದ ಚೆಕ್‌ಗಳನ್ನು ಹಸ್ತಾಂತರಿಸಿದರು.
ಪರಿಹಾರ ಪಡೆದ ಕುಟುಂಬಗಳು:

ಉದಯ್ ಕುಮಾರ್: ಗೌರಿಬಿದನೂರು ಉಪವಿಭಾಗದ ಸಹಾಯಕ ಪವರ್‌ಮ್ಯಾನ್ ಆಗಿದ್ದ ಇವರು ವಿದ್ಯುದಾಘಾತದಿಂದ ಮೃತಪಟ್ಟಿದ್ದರು. ಇವರ ಪತ್ನಿ ವಿ. ಕೀರ್ತನಾ ಅವರಿಗೆ ಚೆಕ್ ವಿತರಿಸಲಾಯಿತು.
ಬಿ.ವಿ. ಮಂಜಪ್ಪ: ಗುಡಿಬಂಡೆ ಉಪವಿಭಾಗದ ಪವರ್‌ಮ್ಯಾನ್ ಆಗಿದ್ದ ಇವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರ ಪತ್ನಿ ದಾಕ್ಷಾಯಿಣಿ ಪರಿಹಾರ ಸ್ವೀಕರಿಸಿದರು.
ಅಮರನಾಥ್: ಚಿಂತಾಮಣಿ ಉಪವಿಭಾಗದ ಪವರ್ ಮ್ಯಾನ್ ಆಗಿದ್ದು, ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಇವರ ಪತ್ನಿ ಮುನಿರತ್ನಮ್ಮ ಅವರಿಗೆ ಪರಿಹಾರ ಹಸ್ತಾಂತರಿಸಲಾಯಿತು.
ವಿಮಾ ಸೌಲಭ್ಯದ ವಿವರ:
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, “ನಮ್ಮ ಇಲಾಖೆಯ ಸಿಬ್ಬಂದಿ, ಅದರಲ್ಲೂ ಮುಖ್ಯವಾಗಿ ಲೈನ್‌ಮ್ಯಾನ್‌ಗಳು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ. ಅವರ ಸುರಕ್ಷತೆಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ‘ಸೂಪರ್ ಸ್ಯಾಲರಿ ಅಕೌಂಟ್’ ಅಡಿಯಲ್ಲಿ ಸಿಗುವ ವಿಮಾ ಪ್ರಯೋಜನದ ಮೂಲಕ ಈ ಪರಿಹಾರವನ್ನು ನೀಡಲಾಗಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ನ ಎಂಡಿ ರಾಮ್ ಪ್ರಸಾತ್ ಮನೋಹರ್, ಮತ್ತು ಬೆಸ್ಕಾಂ ಎಂಡಿ ಡಾ. ಎನ್. ಶಿವಶಂಕರ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.























