ಬೆಂಗಳೂರು, ಫೆ.18 www.bengaluruwire.com: ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರ ದಶಕದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ (ಫೆಬ್ರವರಿ 19, ಗುರುವಾರ) ಹಮ್ಮಿಕೊಂಡಿರುವ “ಬೆಂಗಳೂರು ಚಲೋ” ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಹಾಗೂ ಸಾರಿಗೆ ವಲಯದಲ್ಲಿ ಭಾರಿ ಸಂಚಲನ ಮೂಡಿದೆ.
ಪ್ರತಿಭಟನೆಯ ಬಿಸಿ ತಟ್ಟುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಆದೇಶ ಹೊರಡಿಸಿದೆ. ಆದರೆ, ಈ ಕ್ರಮವನ್ನು “ಏಕಪಕ್ಷೀಯ” ಎಂದು ಕರೆದಿರುವ ನೌಕರರ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿವೆ.
₹1271.92 ಕೋಟಿ ಬಿಡುಗಡೆಗೆ ಸರ್ಕಾರದ ಮುದ್ರೆ:
ಸಾರಿಗೆ ನೌಕರರ ಪ್ರತಿಭಟನೆಯನ್ನು ತಣಿಸಲು ಮುಂದಾದ ಸಾರಿಗೆ ಇಲಾಖೆಯು ಫೆಬ್ರವರಿ 18ರಂದು ಮಹತ್ವದ ಆದೇಶ ಹೊರಡಿಸಿದೆ. ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿ ಮತ್ತು ನೌಕರರ ವೇತನ ಪರಿಷ್ಕರಣೆ ಕುರಿತು ಚರ್ಚಿಸಲು ಹಸಿರು ನಿಶಾನೆ ತೋರಿಸುವುದರ ಜೊತೆಗೆ, ಬಾಕಿ ಉಳಿಸಿಕೊಂಡಿದ್ದ ₹1271.92 ಕೋಟಿ ರೂ.ಗಳ ಹಿಂಬಾಕಿಯನ್ನು (Arrears) ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ವೇತನ ಪರಿಷ್ಕರಣೆ ವಿಳಂಬಕ್ಕೆ ಆರ್ಥಿಕ ಸಂಕಷ್ಟ ಹಾಗೂ ತಾಂತ್ರಿಕ ಕಾರಣಗಳನ್ನು ಸರ್ಕಾರ ನೀಡಿದೆ.

ಜಂಟಿ ಕ್ರಿಯಾ ಸಮಿತಿ (JAC) ಪಟ್ಟು:
ಸರ್ಕಾರದ ಈ ಆದೇಶವು ಕಣ್ಣೊರೆಸುವ ತಂತ್ರ ಎಂದು ಜಂಟಿ ಕ್ರಿಯಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. “ನಮ್ಮೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸದೆ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ ವೇದಿಕೆಗೆ ಆಗಮಿಸಿ, ನಮ್ಮ ಬೇಡಿಕೆಗಳ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲದು,” ಎಂದು ಸಮಿತಿಯ ಮುಖಂಡರು ಎಚ್ಚರಿಸಿದ್ದಾರೆ.
ನಾಳೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ?:
ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 10,000ಕ್ಕೂ ಹೆಚ್ಚು ನೌಕರರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ. ನಾಳೆ ಬೆಳಿಗ್ಗೆ ಪ್ರತಿಭಟನಾ ಸ್ಥಳದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಸಾರಿಗೆ ಮುಖಂಡರು ತಿಳಿಸಿದ್ದಾರೆ.
ಸಾರಿಗೆ ಇಲಾಖೆಯು ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಅಧಿಕಾರಿ ಮತ್ತು ನೌಕರರ ವೇತನ ಪರಿಷ್ಕರಣೆ ವಿಳಂಬಕ್ಕೆ ಸಂಬಂಧಿಸಿದಂತೆ ನೀಡಿರುವ ಪ್ರಮುಖ ಕಾರಣಗಳು ಇಲ್ಲಿವೆ:
ಬಜೆಟ್‌ನಲ್ಲಿ ಅನುದಾನದ ಕೊರತೆ: ಮಾರ್ಚ್ 2023ರಲ್ಲಿ ವೇತನ ಪರಿಷ್ಕರಣೆ ಮಾಡಿದ್ದರೂ, ಅದಕ್ಕೆ ಪೂರಕವಾದ ಯಾವುದೇ ಅನುದಾನವನ್ನು ಆಗಿನ ಬಜೆಟ್‌ನಲ್ಲಿ ಮೀಸಲಿಟ್ಟಿರಲಿಲ್ಲ.
ಶ್ರೀನಿವಾಸಮೂರ್ತಿ ಸಮಿತಿಯ ಶಿಫಾರಸ್ಸು: 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆಗೆ ಸಂಬಂಧಿಸಿದಂತೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ಅವರ ಏಕಸದಸ್ಯ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಶಿಫಾರಸ್ಸಿನ ಅನ್ವಯ ಹಿಂಬಾಕಿ ಪಾವತಿಸುವ ಕುರಿತು ಪ್ರಕ್ರಿಯೆ ನಡೆಯುತ್ತಿರುವುದರಿಂದ ವಿಳಂಬವಾಗಿದೆ.
ನಿವೃತ್ತ ನೌಕರರ ಬಾಕಿ ಪಾವತಿ: ನಿವೃತ್ತ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ₹224 ಕೋಟಿಗಳ ಉಪಧನ (Gratuity) ಬಾಕಿ ಮೊತ್ತಕ್ಕೆ ಯಾವುದೇ ಅನುದಾನ ಮೀಸಲಿಡದಿದ್ದರೂ, ಅದನ್ನು ಈಗ ಬಿಡುಗಡೆ ಮಾಡಲಾಗಿದೆ.
ಬೃಹತ್ ಮೊತ್ತದ ಸಾಲ ಮತ್ತು ಬಡ್ಡಿ: 2019-2023ರ ಅವಧಿಯಲ್ಲಿ ₹4,900 ಕೋಟಿ ಬಾಕಿ ಉಳಿದಿದ್ದರಿಂದ, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಪಾವತಿಗಾಗಿ ಬ್ಯಾಂಕ್‌ಗಳಿಂದ ₹2,000 ಕೋಟಿ ಸಾಲ ಪಡೆಯಲಾಗಿದ್ದು, ಅದರ ಅಸಲು ಮತ್ತು ಬಡ್ಡಿಯನ್ನು ಸರ್ಕಾರವೇ ಪಾವತಿಸುತ್ತಿದೆ.
ಹೊಸ ಬಸ್‌ಗಳ ಸೇರ್ಪಡೆ ಮತ್ತು ನೇಮಕಾತಿ: ಕಳೆದ ಎರಡು ವರೆ ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು 7,800 ಹೊಸ ಬಸ್‌ಗಳ ಸೇರ್ಪಡೆಗಾಗಿ ₹3,510 ಕೋಟಿ ವ್ಯಯಿಸಲಾಗುತ್ತಿದೆ ಹಾಗೂ 10,000 ಹೊಸ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಆದಾಯದ ಸಿಂಹಪಾಲು ವೆಚ್ಚಗಳಿಗೆ: ನಿಗಮಗಳ ಒಟ್ಟು ಆದಾಯದಲ್ಲಿ ಶೇ. 34.50ರಷ್ಟು ಡೀಸೆಲ್ ವೆಚ್ಚಕ್ಕೆ ಮತ್ತು ಶೇ. 46.37ರಷ್ಟು ಸಿಬ್ಬಂದಿ ವೆಚ್ಚಕ್ಕೆ ಅಂದರೆ ಒಟ್ಟು ಶೇ. 80.87ರಷ್ಟು ಆದಾಯವು ಈ ಎರಡು ಬಾಬ್ತುಗಳಿಗೇ ವ್ಯಯವಾಗುತ್ತಿದೆ.
ತೆರಿಗೆ ವಿನಾಯಿತಿ: ನಿಗಮಗಳ ಸಂಕಷ್ಟದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಳೆದ 2 ವರ್ಷಗಳಿಂದ ಪಾವತಿಸಬೇಕಿದ್ದ ₹1,219.23 ಕೋಟಿ ಮೋಟಾರು ವಾಹನ ತೆರಿಗೆಗೆ ಸರ್ಕಾರ ವಿನಾಯಿತಿ ನೀಡಿದೆ.























