ಬೆಂಗಳೂರು, ಫೆ.18 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಮತ್ತು ಅಪಾಯಕಾರಿ ‘ವ್ಹೀಲಿಂಗ್’ ಕೃತ್ಯಗಳು ಮಿತಿಮೀರುತ್ತಿದ್ದು, ಇದನ್ನು ತಡೆಯಲು ಬೆಂಗಳೂರು ನಗರ ಪೊಲೀಸರು ಈಗ ಪೋಷಕರನ್ನೇ ಗುರಿಯಾಗಿಸಿಕೊಂಡು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ಹೊಸಕೋಟೆ ಬಳಿ ನಡೆದ ಅಪಘಾತದಲ್ಲಿ ಅಪ್ರಾಪ್ತ ಬಾಲಕ ಸಾವನ್ನಪ್ಪಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು, ನಿಯಮ ಉಲ್ಲಂಘಿಸುವ ಮಕ್ಕಳ ಪೋಷಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಏರಿಕೆಯಾಗುತ್ತಿದೆ ವ್ಹೀಲಿಂಗ್ ಮತ್ತು ಅಪ್ರಾಪ್ತರ ಚಾಲನೆ ಹಾವಳಿ:
ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಆತಂಕಕಾರಿಯಾಗಿವೆ. ಕೇವಲ ಮೋಜಿನ ಹೆಸರಿನಲ್ಲಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ.

ವ್ಹೀಲಿಂಗ್ ಪ್ರಕರಣಗಳು: 2023ರಲ್ಲಿ 242 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 532ಕ್ಕೆ ಏರಿಕೆಯಾಗಿದೆ. ಇನ್ನು 2025ರಲ್ಲಿ ದಾಖಲೆಯ 646 ವ್ಹೀಲಿಂಗ್ ಪ್ರಕರಣಗಳು ದಾಖಲಾಗಿವೆ.
ಪೋಷಕರ ವಿರುದ್ಧ ಕ್ರಮ: ವ್ಹೀಲಿಂಗ್ ಮಾಡುತ್ತಿದ್ದ ಅಪ್ರಾಪ್ತರ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತಿದೆ. 2023ರಲ್ಲಿ 70, 2024ರಲ್ಲಿ 120 ಮತ್ತು 2025ರಲ್ಲಿ 159 ಪೋಷಕರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.
ಅಪ್ರಾಪ್ತ ವಯಸ್ಕರ ಚಾಲನೆ (IMV ಕಾಯ್ದೆ): ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ ಅಪ್ರಾಪ್ತರ ವಿರುದ್ಧ 2023ರಲ್ಲಿ 95 ಪ್ರಕರಣ, 2024ರಲ್ಲಿ 197 ಪ್ರಕರಣ ಹಾಗೂ 2025ರಲ್ಲಿ ಬರೋಬ್ಬರಿ 414 ಪ್ರಕರಣಗಳು ದಾಖಲಾಗಿವೆ.
ಪೊಲೀಸರ ವಿಶೇಷ ಅಭಿಯಾನ:
ಅಪ್ರಾಪ್ತರು ವಾಹನ ಚಲಾಯಿಸುವುದು ಕಾನೂನುಬಾಹಿರ ಮಾತ್ರವಲ್ಲದೆ, ಇದು ಅವರ ಜೀವಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿ. “ಮಕ್ಕಳು ವಾಹನ ಚಲಾಯಿಸುವುದನ್ನು ತಡೆಯುವುದು ಪೋಷಕರ ಜವಾಬ್ದಾರಿ. ಒಂದು ವೇಳೆ ಅಪ್ರಾಪ್ತರು ವಾಹನ ಚಲಾಯಿಸುತ್ತಾ ಸಿಕ್ಕಿಬಿದ್ದರೆ, ವಾಹನದ ಮಾಲೀಕರು ಅಥವಾ ಪೋಷಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು,” ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗೂ ಈ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದ್ದು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ. (Carecature Courtesy : Gemini AI)






















