ಬೆಂಗಳೂರು, ಫೆ.18 www.bengaluruwire.com: ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ (JAC) ವತಿಯಿಂದ ಫೆಬ್ರವರಿ 19ರ ಗುರುವಾರ “ಬೆಂಗಳೂರು ಚಲೋ” ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ವೇತನ ಬಾಕಿ ಮತ್ತು ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಸಾವಿರಾರು ಕಾರ್ಮಿಕರು ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಿದ್ದಾರೆ.
ಹಲವು ಬಾರಿ ವಿಳಂಬ, ಈ ಬಾರಿ ಪಟ್ಟು:
ಕಳೆದ ವರ್ಷ ಆಗಸ್ಟ್ ಹಾಗೂ ದೀಪಾವಳಿ ಸಮಯದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗಿತ್ತಾದರೂ, ಸರ್ಕಾರದ ಭರವಸೆ ಹಾಗೂ ಹಿರಿಯ ನಾಯಕ ಅನಂತ ಸುಬ್ಬರಾವ್ ಅವರ ನಿಧನದ ಕಾರಣದಿಂದ ಹೋರಾಟವನ್ನು ಮುಂದೂಡಲಾಗಿತ್ತು. ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಶನ್‌ನ ವಿಜಯ್ ಭಾಸ್ಕರ್ ಸೇರಿದಂತೆ ಹಲವು ಸಂಘಟನೆಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಬೇಡಿಕೆಗಳೇನು?:
38 ತಿಂಗಳ ಬಾಕಿ: ಜನವರಿ 1, 2020 ರಿಂದ ಫೆಬ್ರವರಿ 28, 2023 ರವರೆಗಿನ ವೇತನ ಪರಿಷ್ಕರಣೆಯ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು.
ಹೊಸ ವೇತನ ಒಪ್ಪಂದ: ಜನವರಿ 1, 2024 ರಿಂದ ಜಾರಿಗೆ ಬರಬೇಕಿರುವ ಹೊಸ 4 ವರ್ಷಗಳ ಅವಧಿಯ ವೇತನ ಒಪ್ಪಂದವನ್ನು ಅನುಷ್ಠಾನಗೊಳಿಸಬೇಕು.
ಆರ್ಥಿಕ ಸುಧಾರಣೆ: ನಿಗಮಗಳ 7,000 ಕೋಟಿ ರೂ.ಗಳಿಗೂ ಅಧಿಕ ಸಾಲ ಹಾಗೂ ಬಾಕಿ ಇರುವ ಭವಿಷ್ಯ ನಿಧಿ (PF) ಪಾವತಿಗೆ ಕ್ರಮ ವಹಿಸಬೇಕು.
ಪ್ರಯಾಣಿಕರಿಗೆ ಸಂಕಷ್ಟ ಸಾಧ್ಯತೆ:
ಸದ್ಯಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸುವ ಅಧಿಕೃತ ಆದೇಶ ಹೊರಬಿದ್ದಿಲ್ಲವಾದರೂ, ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 10,000ಕ್ಕೂ ಹೆಚ್ಚು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದರಿಂದ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಇದು ವಿದ್ಯಾರ್ಥಿಗಳು ಹಾಗೂ ಕಚೇರಿಗೆ ಹೋಗುವ ಸಾರ್ವಜನಿಕರಿಗೆ ಬಿಸಿ ಮುಟ್ಟಿಸಬಹುದು.
“ಶಕ್ತಿ ಯೋಜನೆಯನ್ನು ಯಶಸ್ವಿಗೊಳಿಸಿದ ನೌಕರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಹೇಳುವ ಸಚಿವರು, ನಮ್ಮ ಬಾಕಿ ಹಣ ನೀಡಲು ಏಕೆ ಮೀನಾಮೇಷ ಎಣಿಸುತ್ತಿದ್ದಾರೆ?” ಎಂದು ಕಾರ್ಮಿಕ ಮುಖಂಡರು ಪ್ರಶ್ನಿಸಿದ್ದಾರೆ.























