ಬೆಂಗಳೂರು, ಫೆ.17 www.bengaluruwire.com : ರಾಜ್ಯದ ವಸತಿ ಯೋಜನೆಗಳ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (K-RERA) ಬಿಲ್ಡರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
2025-26ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ (Q4) ಪ್ರಗತಿ ವರದಿಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸದಿದ್ದರೆ ಭಾರೀ ದಂಡ ವಿಧಿಸುವುದಾಗಿ ಎಚ್ಚರಿಸಿದೆ.
ಏಪ್ರಿಲ್ 15ರ ಒಳಗೆ ವರದಿ ಸಲ್ಲಿಸಿ:
ರೆರಾ ಕಾಯ್ದೆ 2016ರ ಸೆಕ್ಷನ್ 11(1)ರ ಅನ್ವಯ, ಪ್ರತಿ ಬಿಲ್ಡರ್ ಅಥವಾ ಪ್ರವರ್ತಕರು ತಮ್ಮ ಯೋಜನೆಯ ಹಂತ ಹಂತದ ಪ್ರಗತಿಯನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

2025-26ರ 4ನೇ ತ್ರೈಮಾಸಿಕ ವರದಿಯನ್ನು ಸಲ್ಲಿಸಲು ಏಪ್ರಿಲ್ 15, 2026 ಕೊನೆಯ ದಿನವಾಗಿದ್ದು, ಏಪ್ರಿಲ್ 16ರಿಂದ ವಿಳಂಬ ಮಾಡುವವರಿಗೆ ಪ್ರತಿ ವರದಿಗೆ 25,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಹಳೆಯ ಬಾಕಿ ವರದಿ ಸಲ್ಲಿಕೆಗೆ ಫೆ.20 ತನಕ ಗಡುವು:
ಈಗಾಗಲೇ 1, 2 ಮತ್ತು 3ನೇ ತ್ರೈಮಾಸಿಕ ವರದಿಗಳನ್ನು ಸಲ್ಲಿಸದ ಬಿಲ್ಡರ್‌ಗಳಿಗೆ ಪ್ರಾಧಿಕಾರವು ಅಂತಿಮ ಅವಕಾಶ ನೀಡಿದೆ. ಫೆಬ್ರವರಿ 20, 2026ರ ಒಳಗಾಗಿ ಯಾವುದೇ ದಂಡವಿಲ್ಲದೆ ಹಳೆಯ ವರದಿಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಈ ಗಡುವು ಮೀರಿದಲ್ಲಿ, ಅಂತಹ ಪ್ರವರ್ತಕರಿಂದ ದಂಡ ವಸೂಲಿ ಮಾಡಲು ರೆರಾ ಕಠಿಣ ಕ್ರಮ ಕೈಗೊಳ್ಳಲಿದೆ.
ಒಂದು ವೇಳೆ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದರೆ, ಯೋಜನೆಯ ಒಟ್ಟು ಅಂದಾಜು ವೆಚ್ಚದ ಶೇ. 5 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸುವ ಅಧಿಕಾರ ಪ್ರಾಧಿಕಾರಕ್ಕಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. ಸಾರ್ವಜನಿಕರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಬಿಲ್ಡರ್‌ಗಳು ಕೆ-ರೆರಾ ವೆಬ್‌ಸೈಟ್ ಮೂಲಕವೇ ಇ-ಪೇಮೆಂಟ್ ಮಾಡಿ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.























