ಬೆಂಗಳೂರು, ಫೆ.15 www.bengaluruwire.com :ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್‌ಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರು ಇನ್ಮುಂದೆ ತಮ್ಮ ಲಗೇಜುಗಳಿಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೆಚ್ಚ ಹಾಗೂ ಇತರ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ನಿಗಮವು ಲಗೇಜು ಶುಲ್ಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಈ ನೂತನ ದರಗಳು ಫೆಬ್ರವರಿ 16 ರಿಂದ ಜಾರಿಗೆ ಬರಲಿವೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ದರ ಪರಿಷ್ಕರಣೆಗೆ ಕಾರಣವೇನು?:
ಸಾರಿಗೆ ಸಂಸ್ಥೆಯ ಆರ್ಥಿಕ ಹೊರೆ ತಗ್ಗಿಸಲು ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ದರ ಪರಿಷ್ಕರಣೆಯು ಪ್ರಯಾಣಿಕರ ಜೊತೆಗಿರುವ ಹಾಗೂ ಪ್ರಯಾಣಿಕ ರಹಿತ ಲಗೇಜುಗಳಿಗೂ ಅನ್ವಯವಾಗಲಿದೆ.
ಪ್ರತಿ ಬಾರಿಯೂ ಲಗೇಜು ದರ ಏರಿಕೆ ಬಸ್ ಪ್ರಯಾಣ ದರ ಏರಿಕೆಯೊಂದಿಗೆ ಆಗುತ್ತದೆ. ಕಳೆದ ವರ್ಷ ಜನವರಿ 2025 ರಂದು ಬಸ್ ಪ್ರಯಾಣ ದರ ಏರಿಕೆಯಾಗಿತ್ತು, ಆದರೆ ಲಗೇಜು ದರ ಏರಿಕೆ ಮಾಡಿರಲಿಲ್ಲ. ಆ ಸಂಬಂದ ನಾಳೆಯಿಂದ ಜಾರಿಗೆ ಬರುವಂತೆ ಲಗೇಜು ದರ ಏರಿಕೆಯಾಗಲಿದೆ. 30 ಕೆ.ಜಿ. ವರೆಗೂ ಲಗೇಜು ಉಚಿತ, ನಂತರ ದರ ಅನ್ವಯಿಸುತ್ತದೆ. ಈ ಹಿಂದೆ ಲಗೇಜು ದರ ಡಿಸೆಂಬರ್ 2021 ರಲ್ಲಿ ಏರಿಕೆಯಾಗಿತ್ತು.

ಪರಿಷ್ಕೃತ ಲಗೇಜು ದರದ ವಿವರ (ವಿವಿಧ ಹಂತಗಳ ಆಧಾರದ ಮೇಲೆ):
ನಿಗಮವು ಲಗೇಜು ದರವನ್ನು ಪ್ರಯಾಣಿಸುವ ‘ಹಂತ’ಗಳ (Stages) ಆಧಾರದ ಮೇಲೆ ನಿಗದಿಪಡಿಸಿದೆ. ಅದರ ಪ್ರಮುಖ ವಿವರಗಳು ಹೀಗಿವೆ:
* 1 ರಿಂದ 5 ಹಂತಗಳವರೆಗೆ: 6.00 ರೂಪಾಯಿ.
* 6 ರಿಂದ 10 ಹಂತಗಳವರೆಗೆ: 12.00 ರೂಪಾಯಿ.
* 11 ರಿಂದ 15 ಹಂತಗಳವರೆಗೆ: 20.00 ರೂಪಾಯಿ.
* 21 ರಿಂದ 25 ಹಂತಗಳವರೆಗೆ: 28.00 ರೂಪಾಯಿ.
* 31 ರಿಂದ 35 ಹಂತಗಳವರೆಗೆ: 37.00 ರೂಪಾಯಿ.
* 41 ರಿಂದ 45 ಹಂತಗಳವರೆಗೆ: 45.00 ರೂಪಾಯಿ.
* 51 ರಿಂದ 55 ಹಂತಗಳವರೆಗೆ: 54.00 ರೂಪಾಯಿ.
* 71 ರಿಂದ 75 ಹಂತಗಳವರೆಗೆ: 72.00 ರೂಪಾಯಿ.
* 96 ರಿಂದ 100 ಹಂತಗಳವರೆಗೆ: 93.00 ರೂಪಾಯಿ.
* 121 ರಿಂದ 125 ಹಂತಗಳವರೆಗೆ: 114.00 ರೂಪಾಯಿ.
* 151 ರಿಂದ 155 ಹಂತಗಳವರೆಗೆ: 140.00 ರೂಪಾಯಿ.
* ಗರಿಷ್ಠ 156 ರಿಂದ 160 ಹಂತಗಳಿಗೆ: 145.00 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ಈ ಹೊಸ ದರಗಳನ್ನು ಈಗಾಗಲೇ ಇಟಿಎಂ (ETM) ತಂತ್ರಾಂಶದಲ್ಲಿ ಅಳವಡಿಸಲು ಸೂಚನೆ ನೀಡಲಾಗಿದ್ದು, ಫೆಬ್ರವರಿ 16 ರಿಂದ ಕಂಡಕ್ಟರ್‌ಗಳು ಪರಿಷ್ಕೃತ ದರದಂತೆ ಲಗೇಜು ಟಿಕೆಟ್ ನೀಡಲಿದ್ದಾರೆ.























