ಬೆಂಗಳೂರು, ಫೆ.14 www.bengaluruwire.com : ಬನ್ನೇರುಘಟ್ಟ ಜೈವಿಕ ಉದ್ಯಾನವನದ (BBP) ಪುನರ್ವಸತಿ ಕೇಂದ್ರದಲ್ಲಿ ಭೀಕರ ಅಚಾತುರ್ಯವೊಂದು ಸಂಭವಿಸಿದೆ. ಕೇಜ್ ಸ್ವಚ್ಛಗೊಳಿಸುತ್ತಿದ್ದ ಹಿರಿಯ ಪ್ರಾಣಿ ಪಾಲಕ ಶಾಂತಪ್ಪ (48) ಅವರ ಮೇಲೆ ಚಿರತೆಯೊಂದು ದಾಳಿ ನಡೆಸಿ, ಉಗುರಿನಿಂದ ಪರಚಿ ಗಾಯಗೊಳಿಸಿರುವ ಘಟನೆ ನಡೆದಿದೆ.
ನಿಯಮಿತವಾಗಿ ಪ್ರಾಣಿಗಳ ಕೇಜ್ ಸ್ವಚ್ಛಗೊಳಿಸುವ ಕಾರ್ಯದ ಭಾಗವಾಗಿ, ಚಿರತೆಯನ್ನು ಪಕ್ಕದ ಕೇಜ್‌ಗೆ ಸ್ಥಳಾಂತರಿಸಲಾಗಿತ್ತು. ಈ ವೇಳೆ ಶಾಂತಪ್ಪ ಅವರು ಕೇಜ್ ಸ್ವಚ್ಛಗೊಳಿಸುತ್ತಿದ್ದಾಗ, ಪಕ್ಕದ ಕೇಜ್‌ನಲ್ಲಿದ್ದ ಚಿರತೆಯು ಕಬ್ಬಿಣದ ಮೆಷ್ ನಡುವೆ ತನ್ನ ಪಂಜನ್ನು ತೂರಿಸಿ ಏಕಾಏಕಿ ದಾಳಿ ಮಾಡಿದೆ. ದಾಳಿಯ ತೀವ್ರತೆಗೆ ಶಾಂತಪ್ಪ ಅವರ ಕೆನ್ನೆ ಹಾಗೂ ಕುತ್ತಿಗೆಯ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿವೆ.
ಚಿಕಿತ್ಸೆ ಮತ್ತು ಆರೋಗ್ಯ ಸ್ಥಿತಿ:
ಗಾಯಗೊಂಡ ಶಾಂತಪ್ಪ ಅವರಿಗೆ ತಕ್ಷಣವೇ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಸ್ತುತ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. “ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದರೂ ಸಹ ಈ ಅಚಾತುರ್ಯ ನಡೆದಿದೆ. ಪ್ರಸ್ತುತ ನೌಕರರ ಆರೋಗ್ಯ ಸ್ಥಿರವಾಗಿದೆ,” ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್ ಮಾಹಿತಿ ನೀಡಿದ್ದಾರೆ.

ಖಾಯಂ ನೌಕರಿಗಾಗಿ ಕುಟುಂಬದ ಆಗ್ರಹ:
ಗಾಯಾಳು ಶಾಂತಪ್ಪ ಕಳೆದ 25 ವರ್ಷಗಳಿಂದ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆಯೂ ಇವರ ಮೇಲೆ ಕಾಡೆಮ್ಮೆ ದಾಳಿ ನಡೆಸಿತ್ತು. “ನನ್ನ ಪತಿ ಜೀವದ ಹಂಗು ತೊರೆದು ಕಾಡುಪ್ರಾಣಿಗಳ ಸೇವೆ ಮಾಡುತ್ತಿದ್ದಾರೆ. ಈಗಲಾದರೂ ಸರ್ಕಾರ ಅವರನ್ನು ಪರಿಗಣಿಸಿ ಕೆಲಸವನ್ನು ಖಾಯಂ ಮಾಡಬೇಕು,” ಎಂದು ಶಾಂತಪ್ಪ ಅವರ ಪತ್ನಿ ಜಯಮ್ಮ ಕಣ್ಣೀರಿಡುತ್ತಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.























