ಬೆಂಗಳೂರು, ಫೆ.12 www.bengaluruwire.com : ಬ್ರಾಹ್ಮಣ ಸಮಾಜದ ಬಡವರ ಏಳಿಗೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ನಿವೃತ್ತ ಬ್ರಿಗೇಡಿಯರ್ ಎಸ್.ವಿ. ಪ್ರೇಮನಾಥ್ ಮತ್ತು ಅವರ ಕುಟುಂಬದವರು 2.5 ಕೋಟಿ ರೂಪಾಯಿಗಳ ಬೃಹತ್ ದೇಣಿಗೆಯನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಮೂಲಕ ಈ ಮೊತ್ತವನ್ನು ವಿದ್ಯಾರ್ಥಿ ವೇತನ, ವೃದ್ಧಾಶ್ರಮ ಮತ್ತು ವೇದ ಪಾಠಶಾಲೆಗಳ ಅಭಿವೃದ್ಧಿಗೆ ಬಳಸುವ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಲಾಗಿದೆ.
ಫೆಬ್ರವರಿ 11ರಂದು ನಡೆದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಎಸ್. ರಘುನಾಥ್ ಹಾಗೂ ವೇದಾಂತ್ ಸಮೀರ್ ರಾವ್ ಅವರ ತಾಯಿ ಪ್ರಭಾ ನಾಗರಾಜನ್ ಅವರ ನಡುವೆ ಈ ಒಡಂಬಡಿಕೆ ನಡೆಯಿತು. ‘ಬ್ರಿಗೇಡಿಯರ್ ಎಸ್.ವಿ. ಪ್ರೇಮನಾಥ್ ಮತ್ತು ಸಾತಿ ಚಾರಿಟೇಬಲ್ ಫಂಡ್’ ಹೆಸರಿನಲ್ಲಿ ಈ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ಜಂಟಿ ಖಾತೆಯಲ್ಲಿ ಹಣ ಠೇವಣಿ:

90 ವರ್ಷದ ಹಿರಿಯ ಚೇತನ ಬ್ರಿಗೇಡಿಯರ್ ಎಸ್.ವಿ. ಪ್ರೇಮನಾಥ್ ಹಾಗೂ ಅವರ ಕುಟುಂಬದವರು ಸುಮಾರು ಒಂದು ತಿಂಗಳ ಕಾಲ ಮಹಾಸಭೆಯೊಂದಿಗೆ ಚರ್ಚಿಸಿ ಈ ಯೋಜನೆಯನ್ನು ರೂಪಿಸಿದ್ದಾರೆ. ಇವರು ಕಷ್ಟಪಟ್ಟು ಸಂಪಾದಿಸಿದ 2.5 ಕೋಟಿ ರೂಪಾಯಿಗಳನ್ನು ಬಸವನಗುಡಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ’ ಮತ್ತು ‘ವೇದಾಂತ್ ಸಮೀರ್ ರಾವ್’ ಅವರ ಜಂಟಿ ಹೆಸರಿನಲ್ಲಿ ಸ್ಥಿರ ಠೇವಣಿ (Fixed Deposit) ಇರಿಸಲಾಗಿದೆ.
ವಾರ್ಷಿಕ 15 ಲಕ್ಷ ರೂ. ಬಡ್ಡಿ ಬಳಕೆ:
ಈ ಠೇವಣಿಯಿಂದ ವಾರ್ಷಿಕವಾಗಿ ಸುಮಾರು 15 ಲಕ್ಷ ರೂಪಾಯಿ ಬಡ್ಡಿ ಬರುವ ನಿರೀಕ್ಷೆಯಿದ್ದು, ಆ ಮೊತ್ತವನ್ನು ಸಮಾಜದ ಬಡ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ವೇದ ಪಾಠಶಾಲೆಗಳ ನಿರ್ವಹಣೆ ಹಾಗೂ ವೃದ್ಧಾಶ್ರಮದ ಸೇವೆಗಳಿಗೆ ಸಂಪೂರ್ಣವಾಗಿ ಬಳಸಲಾಗುವುದು. ಈ ಉದಾತ್ತ ಕಾರ್ಯಕ್ಕಾಗಿ ಮಹಾಸಭೆಯು ಪ್ರೇಮನಾಥ್ ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ಎನ್. ಸತ್ಯಪ್ರಕಾಶ್, ಖಜಾಂಚಿ ಸುಬ್ಬನರಸಿಂಹ, ಉಪಾಧ್ಯಕ್ಷರಾದ ರಾಮಪ್ರಸಾದ್, ಮಾಜಿ ಕಾರ್ಯದರ್ಶಿ ಪ್ರಭಾಕರ್, ಸಂಘಟನಾ ಕಾರ್ಯದರ್ಶಿ ಅನಿಲ್ ಕುಮಾರ್, ಶಿವಶಂಕರ್, ಭದ್ರಾವತಿ ಸುರೇಶ್ ಹಾಗೂ ಉತ್ತರಹಳ್ಳಿ ಮುರಳಿ ಉಪಸ್ಥಿತರಿದ್ದರು.























