ಬೆಂಗಳೂರು, ಫೆ.11 www.bengaluruwire.com : ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಜಾರಿ ದಳದ ಅಧಿಕಾರಿಗಳು ನಗರದಾದ್ಯಂತ ನಡೆಸಿದ ದಿಢೀರ್ ತಪಾಸಣೆಯಲ್ಲಿ ಅಂದಾಜು 25 ಕೋಟಿ ರೂಪಾಯಿಗಳಷ್ಟು ತೆರಿಗೆ ವಂಚನೆಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ.
ಫೆ.11 ರಂದು ಜಾರಿ ವಿಭಾಗದ 35 ಅಧಿಕಾರಿಗಳ ತಂಡವು ಈ ಬೃಹತ್ ಕಾರ್ಯಾಚರಣೆ ನಡೆಸಿದೆ. ಯಲಹಂಕ, ಕಲ್ಯಾಣನಗರ, ಹೆಬ್ಬಾಳ, ಬಾಣಸವಾಡಿ, ಇಂದಿರಾನಗರ ಮತ್ತು ದೇವನಹಳ್ಳಿಯಂತಹ ಪ್ರಮುಖ ಪ್ರದೇಶಗಳಲ್ಲಿರುವ ಉದ್ದಿಮೆಗಳ ಮೇಲೆ ಈ ದಾಳಿ ನಡೆದಿದೆ. ಸರಕು ಸಾಗಣೆ ಏಜೆನ್ಸಿಗಳು, ನಿರ್ಮಾಣ ಸಾಮಗ್ರಿ ಪೂರೈಕೆದಾರರು, ಎಲೆಕ್ಟ್ರಾನಿಕ್ಸ್ ವರ್ತಕರು ಮತ್ತು ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳನ್ನು ಗುರಿಯಾಗಿಸಿಕೊಂಡು ಈ ತಪಾಸಣೆ ನಡೆಸಲಾಗಿತ್ತು.
ವಂಚನೆಯ ವಿಧಾನ:
ಪರಿಶೀಲನೆಯ ವೇಳೆ ಹಲವಾರು ವರ್ತಕರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ‘ಹೂಡುವಳಿ ತೆರಿಗೆ’ಯನ್ನು (Input Tax Credit) ಬಳಸಿಕೊಂಡು ಸರ್ಕಾರಕ್ಕೆ ಪಾವತಿಸಬೇಕಾದ ನಗದು ತೆರಿಗೆಯನ್ನು ತಪ್ಪಿಸಿರುವುದು ಕಂಡುಬಂದಿದೆ. ಅಲ್ಲದೆ, ಇಲಾಖೆಗೆ ಸಲ್ಲಿಸಿದ ಸ್ವಯಂ ಘೋಷಿತ ವರದಿಗೂ ಮತ್ತು ವಾಸ್ತವಿಕ ವಹಿವಾಟಿಗೂ ದೊಡ್ಡ ಮಟ್ಟದ ವ್ಯತ್ಯಾಸವಿರುವುದು ಪತ್ತೆಯಾಗಿದೆ. ಅಧಿಕಾರಿಗಳು ಪ್ರಸ್ತುತ ಲೆಕ್ಕಪುಸ್ತಕಗಳ ಸೂಕ್ಷ್ಮ ಪರಿಶೀಲನೆಯನ್ನು ಮುಂದುವರಿಸಿದ್ದಾರೆ.























