ಬೆಂಗಳೂರು, ಫೆ.10 www.bengaluruwire.com : ಪರಂಪರೆ ಮತ್ತು ಗುಣಮಟ್ಟಕ್ಕೆ ಹೆಸರಾದ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (KSDL) ತನ್ನ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಜ್ಜಾಗಿದೆ.
ಇದರ ಭಾಗವಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಸಂಸ್ಥೆಯ ರಾಯಭಾರಿಯನ್ನಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ. ಇಂದಿನಿಂದ ಅವರು ಸಂಸ್ಥೆಯ ಅಧಿಕೃತ ರಾಯಭಾರಿಯಾಗಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಈ ವಿಷಯ ಪ್ರಕಟಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಅವರ ಜನಪ್ರಿಯತೆಯನ್ನು ಬಳಸಿಕೊಂಡು, ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಸಂಸ್ಥೆಯ 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಉತ್ತರ ಭಾರತ, ಅಮೆರಿಕ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಜನಪ್ರಿಯಗೊಳಿಸುವುದು ಈ ನೇಮಕದ ಹಿಂದಿನ ಪ್ರಮುಖ ಉದ್ದೇಶವಾಗಿದೆ.
5,000 ಕೋಟಿ ರೂ. ವಹಿವಾಟಿನ ಗುರಿ:

ಸಂಸ್ಥೆಯ ಭವಿಷ್ಯದ ಬಗ್ಗೆ ಮಾತನಾಡಿದ ಸಚಿವರು, “2030ರ ವೇಳೆಗೆ ಕೆ.ಎಸ್.ಡಿ.ಎಲ್ ವಹಿವಾಟನ್ನು 5,000 ಕೋಟಿ ರೂ.ಗಳ ಮಟ್ಟಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ. ಕೇವಲ ಸೋಪ್ ಮಾತ್ರವಲ್ಲದೆ ಶವರ್ ಜೆಲ್, ಹ್ಯಾಂಡ್ ವಾಶ್, ಟಾಲ್ಕಂ ಪೌಡರ್ ಹಾಗೂ ಅಗರಬತ್ತಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆಯಿದೆ. ಇದನ್ನು ಬಳಸಿಕೊಳ್ಳಲು ನಾವು ಹೊಸ ಕಾರ್ಯತಂತ್ರ ರೂಪಿಸಿದ್ದೇವೆ” ಎಂದರು.
ಹೊಸ ಘಟಕಗಳು ಮತ್ತು ಉತ್ಪನ್ನಗಳ ಬಿಡುಗಡೆ
ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ವಿಜಯಪುರ ಜಿಲ್ಲೆ ಹಾಗೂ ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ನೂತನ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದೇ ಸಂದರ್ಭದಲ್ಲಿ ‘ಮೈಸೂರು ಜಾಸ್ಮಿನ್’ ಸೋಪ್‌ಗೆ ಮರುಜೀವ ನೀಡುವ ಯೋಜನೆ ಹಾಗೂ ‘ಸುಗಂಧ ಸಿರಿ’ ಎಂಬ ವಿಶೇಷ ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಶಾಸಕ ಹಾಗೂ ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್. ಅಪ್ಪಾಜಿ ನಾಡಗೌಡ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























