ಭಾರತೀಯರು ಯಾವುದಾದರೂ ಸಮಸ್ಯೆಗೆ ಸಿಲುಕಿದರೆ, ಅದಕ್ಕೊಂದು ‘ಉಪಾಯ’ ಕಂಡುಹಿಡಿಯುವಲ್ಲಿ ಎತ್ತಿದ ಕೈ. ಇದೀಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಸಿನಿಮಾ ನೋಡಲು ಮಾಡಿದ ಐಡಿಯಾ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಸಾಮಾನ್ಯವಾಗಿ ವಿಮಾನ ಪ್ರಯಾಣದ ವೇಳೆ ಇಂಟರ್ನೆಟ್ ಇರುವುದಿಲ್ಲ. ಹೀಗಾಗಿ ಬಹುತೇಕರು ಮೊದಲೇ ಡೌನ್‌ಲೋಡ್ ಮಾಡಿದ ಸಿನಿಮಾಗಳನ್ನು ಅಥವಾ ವೆಬ್ ಸಿರೀಸ್‌ಗಳನ್ನು ನೋಡುತ್ತಾ ಕಾಲ ಕಳೆಯುತ್ತಾರೆ. ಆದರೆ, ಗಂಟೆಗಟ್ಟಲೆ ಕೈಯಲ್ಲಿ ಮೊಬೈಲ್ ಹಿಡಿದು ನೋಡುವುದು ಕಷ್ಟದ ಕೆಲಸ. ಕೈ ನೋವು ಬರುವುದು ಸಹಜ. ಆದರೆ, ಈ ಸಮಸ್ಯೆಗೆ ವೈರಲ್ ಆದ ಪೋಸ್ಟ್ ನಲ್ಲಿನ ಪ್ರಯಾಣಿಕನ ಬಳಿ ಪರಿಹಾರವಿದೆ.
ಏನಿದು ವೈರಲ್ ಪೋಸ್ಟ್?:
ವೈರಲ್ ಆಗಿರುವ ಪೋಸ್ಟ್ ನಲ್ಲಿ, ವ್ಯಕ್ತಿಯೊಬ್ಬರು ಇಂಡಿಗೋ ವಿಮಾನದ ಸೀಟಿನ ಟ್ರೇ ಟೇಬಲ್ ಮೇಲೆ ಕ್ಯಾಮೆರಾ ಟ್ರೈಪಾಡ್ (Tripod) ಅನ್ನು ಜೋಡಿಸಿದ್ದಾರೆ. ಆ ಟ್ರೈಪಾಡ್‌ಗೆ ತಮ್ಮ ಸ್ಮಾರ್ಟ್‌ಫೋನ್ ಫಿಕ್ಸ್ ಮಾಡಿ, ಅದನ್ನು ತಮ್ಮ ಕಣ್ಣಿನ ಮಟ್ಟಕ್ಕೆ (Eye level) ಸರಿಯಾಗಿ ನಿಲ್ಲಿಸಿದ್ದಾರೆ. ಇದರಿಂದ ಅವರು ಕುತ್ತಿಗೆ ಬಗ್ಗಿಸುವ ಅಗತ್ಯವಿಲ್ಲ ಅಥವಾ ಕೈಯಲ್ಲಿ ಫೋನ್ ಹಿಡಿಯುವ ಕೆಲಸವೂ ಇಲ್ಲ. ಆರಾಮವಾಗಿ ಸೀಟಿಗೆ ಒರಗಿ, ಮನೆಯಲ್ಲಿ ಟಿವಿ ನೋಡುವಂತೆ ವಿಮಾನದಲ್ಲೇ ‘ಮಿನಿ ಥಿಯೇಟರ್’ ಅನುಭವ ಪಡೆಯುತ್ತಿರುವ ಪೋಟೋ ಎಲ್ಲರ ಹುಬ್ಬೇರಿಸಿದೆ.

ನೆಟ್ಟಿಗರ ಪ್ರತಿಕ್ರಿಯೆ ಏನು?:
ಈ ಫೊಟೊ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ಕೆಲವರು ಇದನ್ನು “ಅಲ್ಟಿಮೇಟ್ ದೇಶಿ ಜುಗಾಡ್” ಎಂದು ಕರೆದರೆ, ಇನ್ನು ಕೆಲವರು “ಭಾರತದ ಹೊರಗೆ ಇದನ್ನು ತಂತ್ರಜ್ಞಾನ ಎನ್ನುತ್ತಾರೆ, ಆದರೆ ನಮ್ಮಲ್ಲಿ ಇದನ್ನು ಜುಗಾಡ್ ಎನ್ನುತ್ತೇವೆ” ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ವಿಮಾನದಲ್ಲಿನ ಜರ್ನಿಯನ್ನು ಎಂಜಾಯ್ ಮಾಡಲು ಈ ಪ್ರಯಾಣಿಕ ಕಂಡುಕೊಂಡ ದಾರಿ ಈಗ ಟ್ರೆಂಡಿಂಗ್ ವಿಷಯವಾಗಿದೆ. ಮುಂದಿನ ಬಾರಿ ನೀವು ಫ್ಲೈಟ್ ಏರುವಾಗ ಟ್ರೈಪಾಡ್ ತೆಗೆದುಕೊಂಡು ಹೋಗುವ ಪ್ಲಾನ್ ಮಾಡ್ತೀರಾ?























