ಬೆಂಗಳೂರು, ಫೆ.05 www.bengaluruwire.com : ಬಡ ರೋಗಿಗಳಿಗೆ ಸಂಜೀವಿನಿಯಾಗಬೇಕಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲೀಗ ವಂಚಕರ ಜಾಲವೊಂದು ಸದ್ದಿಲ್ಲದೆ ತನ್ನ ಕೈಚಳಕ ತೋರಿಸಿದೆ.
ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆಂದು ಅಳವಡಿಸಿದ್ದ ಅಧಿಕೃತ ‘ಯುಪಿಐ ಕ್ಯೂಆರ್ ಕೋಡ್’ (UPI Scanner) ಬದಲಿಸಿ, ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್ ಅಂಟಿಸುವ ಮೂಲಕ ಬರೋಬ್ಬರಿ ₹23.78 ಲಕ್ಷ ಹಣವನ್ನು ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯ ಎಂಟು ಮಂದಿ ಹೊರಗುತ್ತಿಗೆ ಸಿಬ್ಬಂದಿಯ ವಿರುದ್ಧ ವಿಶ್ವೇಶ್ವರಪುರ (ವಿ.ವಿ.ಪುರಂ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಸ್.ದೀಪಕ್ ಅವರು ನೀಡಿದ ದೂರಿನನ್ವಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಏನಿದು ಹಗರಣ?:

ಆಸ್ಪತ್ರೆಯ ಪ್ರಮುಖ ವಿಭಾಗವಾದ ಇನ್ಫೊಸಿಸ್ ಲ್ಯಾಬ್ ಬಿಲ್ಲಿಂಗ್ ಕೌಂಟರ್‌ನಲ್ಲಿ ರಕ್ತ ಪರೀಕ್ಷೆ ಹಾಗೂ ಇತರೆ ಶುಲ್ಕ ಪಾವತಿಸಲು ಬರುವ ರೋಗಿಗಳ ಅನುಕೂಲಕ್ಕಾಗಿ ಆಸ್ಪತ್ರೆ ಆಡಳಿತ ಮಂಡಳಿ ಯುಪಿಐ ಸ್ಕ್ಯಾನರ್‌ಗಳನ್ನು ಅಳವಡಿಸಿತ್ತು. ಆದರೆ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ, ಆಸ್ಪತ್ರೆಯ ಅಧಿಕೃತ ಸ್ಕ್ಯಾನರ್ ಅನ್ನು ತೆಗೆದು, ಅಲ್ಲಿ ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಕ್ಯೂಆರ್ ಕೋಡ್‌ಗಳನ್ನು ಅಂಟಿಸಿದ್ದರು. ರೋಗಿಗಳು ಸ್ಕ್ಯಾನ್ ಮಾಡಿ ಕಳುಹಿಸುತ್ತಿದ್ದ ಹಣ ನೇರವಾಗಿ ಸರ್ಕಾರದ ಖಜಾನೆ ಸೇರುವ ಬದಲು, ಈ ಸಿಬ್ಬಂದಿಯ ಜೇಬು ಸೇರುತ್ತಿತ್ತು.
ಆರೋಪಿಗಳು ಯಾರು?:
ಪ್ರಯೋಗಾಲಯ, ಹೊರ ರೋಗಿಗಳ ವಿಭಾಗ ಮತ್ತು ಎಕ್ಸ್‌ರೇ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪ್ರೀತಿ, ಎಸ್.ಪುನೀತಾ, ಸಲ್ಮಾ, ಸತ್ಯಾ, ಶಶಿಕಲಾ, ಲಕ್ಷ್ಮಿಕಾಂತಮ್ಮ, ದರ್ಶನ್ ಹಾಗೂ ಮಹೇಂದ್ರ ಎಂಬುವವರೇ ಈ ಕೃತ್ಯ ಎಸಗಿದವರು ಎನ್ನಲಾಗಿದೆ. ಕಳೆದ ಐದಾರು ತಿಂಗಳಿನಿಂದ ಈ ದಂಧೆ ಅವ್ಯಾಹತವಾಗಿ ನಡೆದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆ ₹23,78,693 ಹಣ ದುರುಪಯೋಗವಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?:
ಯುಪಿಐ ಕಲೆಕ್ಷನ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಧೀಕ್ಷಕ ಡಾ. ದೀಪಕ್ ಅವರು ಆಂತರಿಕ ತನಿಖೆಗೆ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿ ಪರಿಶೀಲನೆ ನಡೆಸಿದಾಗ ಸಿಬ್ಬಂದಿಯ ಕಳ್ಳಾಟ ಬಯಲಾಗಿದೆ.
ಘಟನೆ ಕುರಿತು ‘ಬೆಂಗಳೂರು ವೈರ್’ಗೆ ಪ್ರತಿಕ್ರಿಯಿಸಿರುವ ಡಾ. ದೀಪಕ್, “ಇನ್ಫೋಸಿಸ್ ಲ್ಯಾಬ್ ಬಿಲ್ಲಿಂಗ್ ಕೌಂಟರ್‌ನ 8-9 ಕಡೆಗಳಲ್ಲಿ ರೋಗಿಗಳ ಅನುಕೂಲಕ್ಕೆ ಸ್ಕ್ಯಾನರ್ ಇಡಲಾಗಿತ್ತು. ಆರೋಪಿತ ಸಿಬ್ಬಂದಿ ಇದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸದ್ಯ ವಂಚನೆ ಎಸಗಿದ ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಹೆಚ್ಚಿನ ಅಕ್ರಮದ ಬಗ್ಗೆ ತಿಳಿಯಲು ಲೆಕ್ಕಪರಿಶೋಧನೆಗೆ (Audit) ಆದೇಶಿಸಲಾಗಿದೆ,” ಎಂದು ತಿಳಿಸಿದ್ದಾರೆ.
ನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡುವ, ದಿನಕ್ಕೆ 7 ರಿಂದ 8 ಸಾವಿರ ರಕ್ತ ಪರೀಕ್ಷೆಗಳು ನಡೆಯುವ ಜನನಿಬಿಡ ಪ್ರದೇಶವನ್ನೇ ಟಾರ್ಗೆಟ್ ಮಾಡಿ ಈ ವಂಚನೆ ಎಸಗಲಾಗಿದೆ. ಸದ್ಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.























