ಬೆಂಗಳೂರು, ಫೆ.05 www.bengaluruwire.com : ರಾಜಧಾನಿಯ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ದರ ಏರಿಕೆಯ ಬಿಸಿ ಮುಟ್ಟಿಸಿದೆ. ಇದೇ ಫೆಬ್ರವರಿ 9 ರಿಂದಲೇ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಳ ಮಾಡಲಾಗಿದೆ.
ಕಳೆದ ವರ್ಷವಷ್ಟೇ ದರ ಪರಿಷ್ಕರಣೆ ಸಮಿತಿ (FFC) ಶಿಫಾರಸಿನ ಮೇರೆಗೆ ದರ ಪರಿಷ್ಕರಿಸಲಾಗಿತ್ತು. ಭವಿಷ್ಯದಲ್ಲಿ ಒಮ್ಮಿಂದೊಮ್ಮೆಲೆ ಹೆಚ್ಚಿನ ದರ ಏರಿಕೆ ಮಾಡುವುದನ್ನು ತಡೆಯಲು ಮತ್ತು ಸಂಸ್ಥೆಯ ಆರ್ಥಿಕ ನಿರ್ವಹಣೆಗಾಗಿ, ಪ್ರತಿ ವರ್ಷ ಶೇ. 5 ರಷ್ಟು ‘ಸ್ವಯಂಚಾಲಿತ ದರ ಪರಿಷ್ಕರಣೆ’ (Automatic Fare Adjustment) ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಅನ್ವಯ ಈ ಬಾರಿ ಟಿಕೆಟ್ ದರಗಳಲ್ಲಿ ಏರಿಕೆ ಕಂಡುಬಂದಿದೆ.
2024-25ರ ಆರ್ಥಿಕ ವರ್ಷದ ಅಂಕಿಅಂಶಗಳ ಪ್ರಕಾರ, ಮೆಟ್ರೋ ನಿರ್ವಹಣಾ ವೆಚ್ಚದಲ್ಲಿ ಶೇ. 10.20 ರಷ್ಟು ಹೆಚ್ಚಳವಾಗಿದೆ. ಆದಾಗ್ಯೂ, ಪ್ರಯಾಣಿಕರ ಹಿತದೃಷ್ಟಿಯಿಂದ ನಿಯಮಗಳ ಪ್ರಕಾರ ಕೇವಲ ಶೇ. 5 ರಷ್ಟು ದರ ಹೆಚ್ಚಳಕ್ಕೆ ಮಾತ್ರ ಅನುಮೋದನೆ ನೀಡಲಾಗಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಪರಿಷ್ಕೃತ ದರಗಳು ಹೇಗಿವೆ?:

ಒಟ್ಟು 10 ವಲಯಗಳಲ್ಲಿ (Zones) ದರಗಳನ್ನು ಪರಿಷ್ಕರಿಸಲಾಗಿದೆ. ಕನಿಷ್ಠ ದರದಲ್ಲಿ 1 ರೂಪಾಯಿ ಮತ್ತು ಗರಿಷ್ಠ ದರದಲ್ಲಿ 5 ರೂಪಾಯಿ ಹೆಚ್ಚಳವಾಗಿದೆ.
* ಕನಿಷ್ಠ ದರ: 0-2 ಕಿ.ಮೀ ದೂರದ ಪ್ರಯಾಣಕ್ಕೆ (ವಲಯ F1) ಇದ್ದ 10 ರೂ. ದರವು ಇನ್ನು ಮುಂದೆ 11 ರೂ. ಆಗಲಿದೆ.
* ಗರಿಷ್ಠ ದರ: 30 ಕಿ.ಮೀ ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ (ವಲಯ F10) ಇದ್ದ 90 ರೂ. ದರವು 95 ರೂ.ಗಳಿಗೆ ಏರಿಕೆಯಾಗಿದೆ.
* ಉಳಿದಂತೆ, 2-4 ಕಿ.ಮೀಗೆ 21 ರೂ., 4-6 ಕಿ.ಮೀಗೆ 32 ರೂ., ಹೀಗೆ ಪ್ರತಿ ವಲಯಕ್ಕೂ ಸರಾಸರಿ ದರ ಏರಿಕೆಯಾಗಿದೆ.
ದೈನಂದಿನ ಪಾಸುಗಳ ದರವೂ ಏರಿಕೆ:
ಕೇವಲ ಟೋಕನ್ ಟಿಕೆಟ್ ಮಾತ್ರವಲ್ಲದೆ, ದಿನದ ಪಾಸುಗಳ (Day Pass) ದರದಲ್ಲೂ ಹೆಚ್ಚಳವಾಗಿದೆ.
* ಒಂದು ದಿನದ ಸ್ಮಾರ್ಟ್ ಕಾರ್ಡ್ ಪಾಸ್ ದರ 300 ರೂ. ನಿಂದ 313 ರೂ.ಗೆ ಏರಿಕೆಯಾಗಿದೆ. (ಮೊಬೈಲ್ ಕ್ಯೂಆರ್ ದರ 263 ರೂ.)
* ಮೂರು ದಿನಗಳ ಪಾಸ್ ದರ 600 ರೂ. ನಿಂದ 628 ರೂ.ಗೆ ಏರಿಕೆಯಾಗಿದೆ.
* ಐದು ದಿನಗಳ ಪಾಸ್ ದರ 900 ರೂ. ನಿಂದ 943 ರೂ.ಗೆ ಹೆಚ್ಚಳವಾಗಿದೆ.
ರಿಯಾಯಿತಿ ಮುಂದುವರಿಕೆ: ಪ್ರಯಾಣಿಕರಿಗೆ ನಿರಾಳ
ದರ ಏರಿಕೆಯ ನಡುವೆಯೂ ಮೆಟ್ರೋ ನಿಗಮವು ಸ್ಮಾರ್ಟ್ ಕಾರ್ಡ್ ಮತ್ತು NCMC ಕಾರ್ಡ್ ಬಳಕೆದಾರರಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ಮುಂದುವರಿಸಿದೆ. ಪೀಕ್ ಅವಧಿಯಲ್ಲಿ ಶೇ. 5 ರಷ್ಟು ಮತ್ತು ಪೀಕ್ ಅಲ್ಲದ (Non-peak) ಅವಧಿ ಹಾಗೂ ರಜಾ ದಿನಗಳಲ್ಲಿ ಶೇ. 10 ರಷ್ಟು ರಿಯಾಯಿತಿ ಎಂದಿನಂತೆ ಲಭ್ಯವಿರುತ್ತದೆ.






















