ಬೆಂಗಳೂರು, ಫೆ.05 www.bengaluruwire.com : ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಾಹಿತ್ಯ ಸರಸ್ವತಿಯ ವರಪುತ್ರ ‘ನಾದಬ್ರಹ್ಮ’ ಹಂಸಲೇಖ ಅವರಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ (BIFFes) ವತಿಯಿಂದ ಪ್ರತಿಷ್ಠಿತ ‘ಜೀವಮಾನದ ಶ್ರೇಷ್ಠ ಸಾಧನೆ’ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಸಿನಿಮಾಸಕ್ತರ ಮನಗೆದ್ದಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಶುಕ್ರವಾರ (ಫೆಬ್ರವರಿ 06) ತೆರೆಬೀಳಲಿದೆ. ಈ ಸಂದರ್ಭದಲ್ಲಿ ಹಂಸಲೇಖ ಅವರು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ, ಈ ಗೌರವವನ್ನು ಪ್ರದಾನ ಮಾಡಲಾಗುತ್ತಿದೆ.
ಅಧಿಕೃತ ಆಹ್ವಾನ:
ಪ್ರಶಸ್ತಿ ಘೋಷಣೆಯ ಬೆನ್ನಲ್ಲೇ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ವಿನೋದ್ ಚಂದ್ರ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾದ ಮುರಳಿ ಅವರು ಗುರುವಾರ ಹಂಸಲೇಖ ಅವರನ್ನು ಖುದ್ದು ಭೇಟಿ ಮಾಡಿ, ಶುಕ್ರವಾರ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಧಿಕೃತವಾಗಿ ಆಹ್ವಾನ ನೀಡಿದರು.

ಸಮಾರೋಪ ಸಮಾರಂಭದ ವಿವರ:
ಚಿತ್ರೋತ್ಸವದ ಸಮಾರೋಪ ಸಮಾರಂಭವು ಶುಕ್ರವಾರ ಸಂಜೆ 6 ಗಂಟೆಗೆ ರಾಜಾಜಿನಗರದ ಲುಲು ಮಾಲ್‌ನಲ್ಲಿ ಅದ್ಧೂರಿಯಾಗಿ ಜರುಗಲಿದೆ. ಈ ಸಮಾರಂಭದಲ್ಲಿ ಹಂಸಲೇಖ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ಇದೇ ವೇದಿಕೆಯಲ್ಲಿ ಚಿತ್ರೋತ್ಸವದ ಸ್ಪರ್ಧಾ ವಿಭಾಗಗಳಾದ ಏಷ್ಯನ್ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ವಿಭಾಗಗಳಲ್ಲಿ ವಿಜೇತರಾದವರಿಗೂ ಪ್ರಶಸ್ತಿ ವಿತರಿಸಲಾಗುತ್ತದೆ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಗಣ್ಯರ ದಂಡು:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗೂಂಡೂರಾವ್ ವಹಿಸಲಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಡಾ. ಸಾಧು ಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ ಹಾಗೂ ಚಿತ್ರೋತ್ಸವದ ರಾಯಭಾರಿ, ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.






















