ಬೆಂಗಳೂರು, ಫೆ.05 www.bengaluruwire.com : ದೇಶದ ತಂತ್ರಜ್ಞಾನ ರಾಜಧಾನಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುಂಬೈ ನಡುವಿನ ಸಂಪರ್ಕ ಕೊಂಡಿಯನ್ನು ಬಲಪಡಿಸುವ ನಿಟ್ಟಿನಲ್ಲಿ, ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ರೈಲ್ವೆ ಸಚಿವರೊಡನೆ ಚರ್ಚಿಸಿರುವುದನ್ನು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಸ್ವಾಗತಿಸಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಪಕ್ಷ ರಾಜಕಾರಣ ಮಾಡಬಾರದು. ಕೇಂದ್ರ ಸಚಿವರುಗಳಾದ ಜೋಶಿ ಮತ್ತು ಕುಮಾರಸ್ವಾಮಿ ಅವರು ಸ್ಪಂದಿಸಿರುವುದು ಸಂತಸದ ವಿಷಯ. ಆದರೆ, ಇದು ಕೇವಲ ಭೇಟಿಗೆ ಸೀಮಿತವಾಗಬಾರದು. ಈ ಯೋಜನೆಯು ತಾರ್ಕಿಕ ಅಂತ್ಯವನ್ನು ಕಂಡು, ಶೀಘ್ರವಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕಕ್ಕೆ ಆರ್ಥಿಕ ಸಂಜೀವಿನಿ:
ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಯೋಜನೆಗಳಿಂದ ರಾಜ್ಯದ ಒಳಗೆ ಕೇವಲ 100 ಕಿ.ಮೀ ವ್ಯಾಪ್ತಿಯಷ್ಟೇ ಪ್ರಯೋಜನವಾಗಲಿದೆ. ಆದರೆ, ಬೆಂಗಳೂರು-ಪುಣೆ-ಮುಂಬೈ ಕಾರಿಡಾರ್ ನಿರ್ಮಾಣವಾದರೆ ಇಡೀ ಉತ್ತರ ಕರ್ನಾಟಕದ ಚಿತ್ರಣವೇ ಬದಲಾಗಲಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ ಭಾಗಗಳಲ್ಲಿ ಬೃಹತ್ ಆರ್ಥಿಕ ಮತ್ತು ಕೈಗಾರಿಕಾ ಕ್ರಾಂತಿಗೆ ಇದು ನಾಂದಿ ಹಾಡಲಿದೆ ಎಂದು ಸಚಿವರು ವಿವರಿಸಿದರು.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು, ಮುಂಬೈ-ಪುಣೆ ಕಾರಿಡಾರ್ ಅನ್ನು ಬೆಂಗಳೂರಿನವರೆಗೆ ವಿಸ್ತರಿಸಲು ವಿಸ್ತೃತ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಕೋರಲಾಗಿದೆ ಎಂದು ಪಾಟೀಲ್ ತಿಳಿಸಿದರು.
ಲಿಂಗಾಯತ ಶಾಸಕರ ಸಭೆ: ಶಕ್ತಿ ಪ್ರದರ್ಶನವಲ್ಲ:
ಇದೇ ವೇಳೆ, ಇತ್ತೀಚೆಗೆ ನಡೆದ ಕಾಂಗ್ರೆಸ್ ಲಿಂಗಾಯತ ಶಾಸಕರ ಸಭೆಯ ಬಗ್ಗೆ ಸ್ಪಷ್ಟನೆ ನೀಡಿದ ಎಂ.ಬಿ. ಪಾಟೀಲ್, “ಅಶೋಕ ಪಟ್ಟಣ ಮತ್ತು ಬಿ.ಆರ್. ಪಾಟೀಲ್ ಕರೆದಿದ್ದ ಸಭೆ ಕೇವಲ ಸಮುದಾಯದ ಹಿತಾಸಕ್ತಿ ಚರ್ಚೆಗಷ್ಟೇ ಸೀಮಿತವಾಗಿತ್ತು. ಇದರಲ್ಲಿ ಯಾವುದೇ ಶಕ್ತಿ ಪ್ರದರ್ಶನದ ಉದ್ದೇಶವಿರಲಿಲ್ಲ. 1989ರಲ್ಲಿ ಲಿಂಗಾಯತರ ಬೆಂಬಲದಿಂದ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿತ್ತು. ಈಗಲೂ 34 ಲಿಂಗಾಯತ ಶಾಸಕರಿದ್ದೇವೆ.
ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೇಳುವುದರಲ್ಲಿ ತಪ್ಪಿಲ್ಲ, ಆದರೆ ನಾವು ಯಾರದೇ ಪಾಲನ್ನು ಕಸಿದುಕೊಳ್ಳುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.






















