ಬೆಂಗಳೂರು, ಫೆ.4 www.bengaluruwire.com : ಆರ್ಥಿಕ ಸಂಕಷ್ಟದಲ್ಲಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹಳೆ ಮದ್ರಾಸ್ ರಸ್ತೆಯ ಕೋನದಾಸಪುರ ಭಾಗ್ಯದ ಬಾಗಿಲು ತೆರೆದಿದೆ. ಇತ್ತೀಚೆಗೆ ನಡೆದ ಇ-ಹರಾಜಿನಲ್ಲಿ ಬರೋಬ್ಬರಿ 2,097 ಕೋಟಿ ರೂಪಾಯಿ ಬಾಚಿಕೊಂಡಿರುವ ಬಿಡಿಎ, ಇದೀಗ ಅದೇ ಹುಮ್ಮಸ್ಸಿನಲ್ಲಿ ನಗರದ ಪ್ರಮುಖ ಬಡಾವಣೆಗಳಲ್ಲಿರುವ ಮೂಲೆ ನಿವೇಶನ (Corner Sites) ಮತ್ತು ವಾಣಿಜ್ಯ ನಿವೇಶನಗಳ (Commercial Sites) ಬೃಹತ್ ಹರಾಜಿಗೆ ಹೊಸ ಅಧಿಸೂಚನೆ ಹೊರಡಿಸಿದೆ.
20 ಸುತ್ತಿನ ಕಾದಾಟ, 468 ಕೋಟಿ ಹೆಚ್ಚುವರಿ ಲಾಭ:
ಬಿಡಿಎ ಇತಿಹಾಸದಲ್ಲೇ ಇದೊಂದು ಅಪರೂಪದ ಹರಾಜು ಪ್ರಕ್ರಿಯೆಯಾಗಿದೆ. ಕೋನದಾಸಪುರದಲ್ಲಿನ 52 ಎಕರೆ ವಾಣಿಜ್ಯ ಜಮೀನಿಗಾಗಿ ನಡೆದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಬ್ರಿಗೇಡ್ ಗ್ರೂಪ್ ಮತ್ತು ಗೋದ್ರೇಜ್ ಪ್ರಾಪರ್ಟೀಸ್‌ನಂತಹ ದಿಗ್ಗಜ ಕಂಪನಿಗಳನ್ನು ಹಿಂದಿಕ್ಕಿ, ಹೈದರಾಬಾದ್ ಮೂಲದ ‘ಶ್ರೀನಿ ನಿರ್ಮಾಣ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಜಯಗಳಿಸಿದೆ.
ಸುಮಾರು 20 ಸುತ್ತುಗಳ ಕಾಲ ನಡೆದ ಈ ಲೈವ್ ಬಿಡ್ಡಿಂಗ್‌ನಲ್ಲಿ, ಬಿಡಿಎ ನಿರೀಕ್ಷೆಗಿಂತ 468 ಕೋಟಿ ರೂ. ಹೆಚ್ಚು ಆದಾಯ ಹರಿದು ಬಂದಿದೆ. ಅಂತಿಮವಾಗಿ ಪ್ರತಿ ಚದರ ಮೀಟರ್‌ಗೆ ಬರೋಬ್ಬರಿ 98,466 ರೂ.ಗಳಂತೆ (ಎಕರೆಗೆ 40.13 ಕೋಟಿ ರೂ.) ಜಮೀನು ಮಾರಾಟವಾಗಿದೆ. ಈ ಹಣವನ್ನು ಬಳಸಿಕೊಂಡು ಹೆಬ್ಬಾಳದಲ್ಲಿ ಸುರಂಗ ಮಾರ್ಗ ಸೇರಿದಂತೆ ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಬಿಡಿಎ ಯೋಜನೆ ರೂಪಿಸಿದೆ.

ಫೆಬ್ರವರಿಯಲ್ಲಿ ಮತ್ತೆ ಹರಾಜು ಮೇಳ: ಎಲ್ಲೆಲ್ಲಿ ನಿವೇಶನ ಲಭ್ಯ?:
ಕೋನದಾಸಪುರದ ಯಶಸ್ಸಿನ ಬೆನ್ನಲ್ಲೇ, ಬಿಡಿಎ ದಕ್ಷಿಣ, ಉತ್ತರ, ಪಶ್ಚಿಮ ಮತ್ತು ಪೂರ್ವ ವಲಯಗಳಲ್ಲಿ ಖಾಲಿ ಇರುವ ಬೃಹತ್ ವಾಣಿಜ್ಯ ನಿವೇಶನಗಳ ಇ-ಹರಾಜಿಗೆ (Bulk Land Auction) ಅಧಿಸೂಚನೆ (Notification) ಹೊರಡಿಸಿದೆ. ಲಗತ್ತಿಸಲಾದ ಅಧಿಸೂಚನೆಯಂತೆ ವಿವರಗಳು ಹೀಗಿವೆ:
ದಕ್ಷಿಣ ವಲಯ (South Zone): ಬಿಎಸ್‌ಕೆ 3ನೇ ಹಂತ, ಜೆ.ಪಿ ನಗರ 8ನೇ ಮತ್ತು 9ನೇ ಹಂತ, ಬನಶಂಕರಿ 3ನೇ ಹಂತ, ಅಂಜನಾಪುರ ಬಡಾವಣೆಗಳಲ್ಲಿ ನಿವೇಶನಗಳು ಲಭ್ಯವಿದ್ದು, ಇಲ್ಲಿ ಪ್ರತಿ ಚದರ ಮೀಟರ್‌ಗೆ 76,000 ರೂ. ನಿಂದ 1,50,000 ರೂ. ವರೆಗೆ ಮೂಲ ದರ ನಿಗದಿಪಡಿಸಲಾಗಿದೆ.
ಉತ್ತರ ವಲಯ (North Zone): ಆರ್‌ಎಂವಿ (RMV) 2ನೇ ಹಂತ ಮತ್ತು ಎಚ್‌ಬಿಆರ್ (HBR) 1ನೇ ಹಂತದಲ್ಲಿ ನಿವೇಶನಗಳಿದ್ದು, ಇಲ್ಲಿ ಅತಿ ಹೆಚ್ಚು ಅಂದರೆ ಚದರ ಮೀಟರ್‌ಗೆ 1,71,500 ರೂ. ಮೂಲ ದರವಿದೆ.
ಪಶ್ಚಿಮ ವಲಯ (West Zone): ನಾಗರಭಾವಿ 2ನೇ ಹಂತ ಮತ್ತು ಜ್ಞಾನಭಾರತಿ ಬಡಾವಣೆಗಳಲ್ಲಿ ವಾಣಿಜ್ಯ ನಿವೇಶನಗಳು ಲಭ್ಯವಿದೆ.
ಪೂರ್ವ ವಲಯ (East Zone): ಕಾಟಂನಲ್ಲೂರು ಮತ್ತು ಕೋನದಾಸಪುರ (ಸಿಎಸ್-1ಎ, 1ಬಿ) ಭಾಗದಲ್ಲಿಯೂ ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ.
ಹರಾಜಿನ ಪ್ರಮುಖ ದಿನಾಂಕಗಳು (2026):
ಆಸಕ್ತ ಸಾರ್ವಜನಿಕರು ಮತ್ತು ಉದ್ಯಮಿಗಳು ಈ ಕೆಳಗಿನ ದಿನಾಂಕಗಳನ್ನು ಗಮನಿಸಬೇಕಿದೆ:
ಇ-ಹರಾಜು ಪ್ರಾರಂಭದ ದಿನಾಂಕ: 28.01.2026
ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 13.02.2026 (ಸಂಜೆ 5 ಗಂಟೆ)
ಲೈವ್ ಬಿಡ್ಡಿಂಗ್ (Live Bidding) ದಿನಾಂಕ: 16.02.2026 (ಬೆಳಿಗ್ಗೆ 11 ಗಂಟೆಯಿಂದ) ಮತ್ತು 17.02.2026 ರವರೆಗೆ.
ಹೆಚ್ಚಿನ ಮಾಹಿತಿಗಾಗಿ ಬಿಡಿಎ ಅಧಿಕೃತ ವೆಬ್‌ಸೈಟ್ https://bdakarnataka.in ಗೆ ಭೇಟಿ ನೀಡಬಹುದು.























