ಬೆಂಗಳೂರು, ಜ.31 www.bengaluruwire.com : ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಚಲನಚಿತ್ರ ಸಂಕಲನಕ್ಕೆ (Editing) ಬೇಕಾದ ಕಲಾತ್ಮಕ ಅಂತಃಪ್ರಜ್ಞೆ ಮತ್ತು ಭಾವನಾತ್ಮಕ ಸೂಕ್ಷ್ಮತೆಯನ್ನು ಕೃತಕ ಬುದ್ಧಿಮತ್ತೆ (AI) ನೀಡಲು ಸಾಧ್ಯವಿಲ್ಲ ಎಂದು ಖ್ಯಾತ ಚಲನಚಿತ್ರ ಸಂಕಲನಕಾರ ಶ್ರೀಕರ್ ಪ್ರಸಾದ್ ಅಭಿಪ್ರಾಯಪಟ್ಟರು.
ನಗರದಲ್ಲಿ ನಡೆಯುತ್ತಿರುವ 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಆಯೋಜಿಸಲಾಗಿದ್ದ ‘ದಿ ಇನ್ವಿಸಿಬಲ್ ಆರ್ಟ್ ಆಫ್ ಎಡಿಟಿಂಗ್’ ಸಂವಾದದಲ್ಲಿ ಅವರು ಮಾತನಾಡಿದರು.
ಎಐ ಸಂಶೋಧನೆ ಮತ್ತು ದಕ್ಷತೆಗೆ ಉಪಯುಕ್ತವಾದರೂ, ಸಂಕಲನ ಎಂಬುದು ಮಾನವನ ಸಹಜ ಪ್ರವೃತ್ತಿ ಮತ್ತು ಅನುಭವದ ಮೇಲೆ ನಿಂತಿದೆ. ಸಿನಿಮಾ ಕೇವಲ ದೃಶ್ಯಗಳ ಜೋಡಣೆಯಲ್ಲ, ಅದು ಪ್ರೇಕ್ಷಕರನ್ನು ತಲುಪುವ ಭಾವನೆಗಳ ಕಲೆ ಎಂದು ಅವರು ಪ್ರತಿಪಾದಿಸಿದರು.
ತಮ್ಮ ಕಾರ್ಯವಿಧಾನದ ಬಗ್ಗೆ ವಿವರಿಸಿದ ಪ್ರಸಾದ್, “ನಾನು ಚಿತ್ರೀಕರಣ ನಡೆಯುವ ಸ್ಥಳಕ್ಕೆ (Set) ಭೇಟಿ ನೀಡುವುದಿಲ್ಲ. ಇದರಿಂದ ಒಬ್ಬ ಸಾಮಾನ್ಯ ಪ್ರೇಕ್ಷಕನಂತೆ ವಸ್ತುನಿಷ್ಠವಾಗಿ ದೃಶ್ಯಗಳನ್ನು ನೋಡಲು ಸಾಧ್ಯವಾಗುತ್ತದೆ. ಸೆಟ್‌ನಲ್ಲಿನ ಕಷ್ಟಗಳು ಎಡಿಟಿಂಗ್ ನಿರ್ಧಾರದ ಮೇಲೆ ಪ್ರಭಾವ ಬೀರಬಾರದು,” ಎಂದರು.

ಅಲ್ಲದೆ, ಚಿತ್ರಕಥೆಯ ಹಂತದಲ್ಲೇ ಸಂಕಲನಕಾರನ ಕೆಲಸ ಶುರುವಾಗಬೇಕು, ಆಗ ಮಾತ್ರ ಕಥೆಗೆ ನಿಖರವಾದ ದೃಶ್ಯ ರೂಪ ಮತ್ತು ಲಯ ನೀಡಲು ಸಾಧ್ಯ ಎಂದು ಹೇಳಿದರು.
ಕೆಲವೊಮ್ಮೆ ಅದ್ಭುತವಾಗಿ ಮೂಡಿಬಂದ ದೃಶ್ಯಗಳೂ ಸಿನಿಮಾದ ವೇಗಕ್ಕೆ (Pace) ಅಡ್ಡಿಯಾದರೆ, ಅವುಗಳನ್ನು ನಿರ್ದಯವಾಗಿ ಕತ್ತರಿಸುವ ಧೈರ್ಯ ಸಂಕಲನಕಾರನಿಗೆ ಇರಬೇಕು. ಸಣ್ಣ ತಪ್ಪು ನಿರ್ಧಾರವೂ ಪ್ರೇಕ್ಷಕ ಮತ್ತು ಸಿನಿಮಾದ ನಡುವಿನ ಭಾವನಾತ್ಮಕ ಸಂಬಂಧವನ್ನು ಮುರಿಯಬಲ್ಲದು ಎಂದು ಎಚ್ಚರಿಸಿದರು. ದೃಶ್ಯ ಪರಿಣಾಮಗಳು (VFX) ಕಥೆಗೆ ಪೂರಕವಾಗಿರಬೇಕೇ ಹೊರತು, ಕಥೆಯನ್ನು ಮೀರಿಸಬಾರದು. ತಂತ್ರಜ್ಞಾನ ಬದಲಾದರೂ ಸಿನಿಮಾ ಮಾನವ ಸಂವೇದನೆಯ ಕಲಾಪ್ರಕಾರವಾಗಿಯೇ ಉಳಿಯಲಿದೆ ಎಂದು ಶ್ರೀಕರ್ ಪ್ರಸಾದ್ ವಿಶ್ಲೇಷಿಸಿದರು.






















