ಬೆಂಗಳೂರು, ಜ.30 www.bengaluruwire.com : ಸಾಮಾನ್ಯವಾಗಿ ರಸ್ತೆಗಳಿಗೆ ರಾಜಕಾರಣಿಗಳ, ಸಿನಿಮಾ ತಾರೆಯರ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡುವುದು ವಾಡಿಕೆ. ಆದರೆ, ಬೆಂಗಳೂರಿನ ಕಸ್ತೂರಿ ಬಡಾವಣೆ ನಿವಾಸಿಗಳು ಮಾತ್ರ ವಿಶಿಷ್ಟವಾದ ಮಾದರಿಯನ್ನು ಹಾಕಿಕೊಟ್ಟಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ಕಾನೂನು ಹೋರಾಟ ನಡೆಸಿ, ಭೂಗಳ್ಳರ ಪಾಲಾಗುತ್ತಿದ್ದ ರಸ್ತೆಯನ್ನು ಉಳಿಸಿಕೊಟ್ಟ ವಕೀಲರ ಹೆಸರನ್ನೇ ಆ ರಸ್ತೆಗೆ ಇಡುವ ಮೂಲಕ ಕೃತಜ್ಞತೆ ಮೆರೆದಿದ್ದಾರೆ.
ರಾಜಗೋಪಾಲ ನಗರ ಮತ್ತು ಲಗ್ಗೆರೆ ನಡುವೆ ಸಂಪರ್ಕ ಕಲ್ಪಿಸುವ ಕಸ್ತೂರಿ ಬಡಾವಣೆಯ ಪ್ರಮುಖ ರಸ್ತೆಯೊಂದು ಒತ್ತುವರಿಯಾಗಿತ್ತು. ಇದರಿಂದಾಗಿ ಅಲ್ಲಿನ ಸುಮಾರು 450ಕ್ಕೂ ಹೆಚ್ಚು ಕುಟುಂಬಗಳಿಗೆ ಓಡಾಡಲು ತೀವ್ರ ತೊಂದರೆಯಾಗುತ್ತಿತ್ತು. ಈ ರಸ್ತೆಯನ್ನು ಉಳಿಸಿಕೊಳ್ಳಲು ಸ್ಥಳೀಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

20 ವರ್ಷಗಳ ಸುದೀರ್ಘ ಕಾನೂನು ಹೋರಾಟ:

ಬಡಾವಣೆಯ ನಿವಾಸಿಗಳ ಪರವಾಗಿ ವಕೀಲರಾದ ರಮೇಶ್ ಚಂದ್ರ ಅವರು ಸುಮಾರು 20 ವರ್ಷಗಳ ಕಾಲ ಸತತವಾಗಿ ಕಾನೂನು ಹೋರಾಟ ನಡೆಸಿದರು. ಈ ಜಾಗವು ರಸ್ತೆಗಾಗಿ ಮೀಸಲಿಟ್ಟಿದ್ದು, ಇದು ಯಾರೊಬ್ಬರ ಸ್ವಂತ ಆಸ್ತಿಯಲ್ಲ ಎಂಬುದನ್ನು ನ್ಯಾಯಾಲಯದಲ್ಲಿ ಸಾಕ್ಷಿ ಸಮೇತ ವಾದ ಮಂಡಿಸಿದ್ದರು. ಅಂತಿಮವಾಗಿ ಹೈಕೋರ್ಟ್ ನಿವಾಸಿಗಳ ಪರವಾಗಿ ತೀರ್ಪು ನೀಡುವ ಮೂಲಕ, ಒತ್ತುವರಿಯಾಗಿದ್ದ ಜಾಗವನ್ನು ರಸ್ತೆಗಾಗಿಯೇ ಬಳಸುವಂತೆ ಆದೇಶಿಸಿತು.

ಗಣರಾಜ್ಯೋತ್ಸವದಂದು ವಿಶೇಷ ಗೌರವ:
ನ್ಯಾಯಾಲಯದ ತೀರ್ಪಿನ ನಂತರ ರಸ್ತೆ ಅಭಿವೃದ್ಧಿಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಈ ಸಂತೋಷವನ್ನು ಹಂಚಿಕೊಳ್ಳಲು ಮತ್ತು ತಮಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ವಕೀಲರಿಗೆ ಗೌರವ ಸಲ್ಲಿಸಲು ನಿವಾಸಿಗಳು ಗಣರಾಜ್ಯೋತ್ಸವದ ದಿನವನ್ನು ಆಯ್ಕೆ ಮಾಡಿಕೊಂಡರು.
ಸೋಮವಾರ (ಜ.26) ನಡೆದ ಸಮಾರಂಭದಲ್ಲಿ, ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ನಿವಾಸಿಗಳು ಒಟ್ಟಾಗಿ ಸೇರಿ ರಸ್ತೆಗೆ “ನ್ಯಾಯವಾದಿ ರಮೇಶ್ ಚಂದ್ರ ಹೆಬ್ರಿ ರಸ್ತೆ” ಎಂದು ನಾಮಕರಣ ಮಾಡಿದರು. ವಕೀಲ ರಮೇಶ್ ಚಂದ್ರ ಹಾಗೂ ಅವರನ್ನು ಅವರ ಪತ್ನಿಯೊಂದಿಗೆ ದಂಪತಿ ಸಮೇತ ಸನ್ಮಾನಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
“ನಮ್ಮ ಬಡಾವಣೆಗೆ ಈ ರಸ್ತೆಯೇ ಜೀವನಾಡಿ. ಇದನ್ನು ಉಳಿಸಿಕೊಟ್ಟ ವಕೀಲರ ಋಣ ತೀರಿಸಲು ಸಾಧ್ಯವಿಲ್ಲ. ಅವರ ಹೆಸರನ್ನು ರಸ್ತೆಗೆ ಇಡುವ ಮೂಲಕ ನಮ್ಮ ಕೃತಜ್ಞತೆಯನ್ನು ಅರ್ಪಿಸಿದ್ದೇವೆ,” ಎಂದು ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಹಾಲೇಶ್ ತಿಳಿಸಿದರು. ಈ ಮೂಲಕ ಕಸ್ತೂರಿ ಬಡಾವಣೆ ನಿವಾಸಿಗಳು ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್/ಚಾನಲ್ ಉಚಿತವಾಗಿ Subscribe ಆಗಲು Dailyhunt, Facebook, Instagram, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.






















