ಬೆಂಗಳೂರು, ಜ.30 www.bengaluruwire.com : ಬಡತನ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ದುಬಾರಿ ವೆಚ್ಚದ ಕೃತಕ ಗರ್ಭಧಾರಣೆ ಚಿಕಿತ್ಸೆ ಪಡೆಯಲಾಗದೆ ಪರದಾಡುತ್ತಿದ್ದ ರಾಜ್ಯದ ದಂಪತಿಗಳಿಗೆ ಕರ್ನಾಟಕ ಸರ್ಕಾರ ಭರವಸೆಯ ಹೊಂಗಿರಣವನ್ನು ಹರಿಸಿದೆ.
ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ (AB-PMJAY CM’s ArK) ಯೋಜನೆಯಡಿ ಇನ್ಮುಂದೆ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಚಿಕಿತ್ಸೆಗಳಾದ ಐವಿಎಫ್ (IVF) ಹಾಗೂ ಇತರೆ ಪ್ರಕ್ರಿಯೆಗಳನ್ನು ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (PHH – Priority House Hold) ಕಾರ್ಡ್ ಹೊಂದಿರುವ ಅರ್ಹ ದಂಪತಿಗಳಿಗೆ ಈ ಸೌಲಭ್ಯ ದೊರೆಯಲಿದೆ. ಮಗುವನ್ನು ಪಡೆಯಲು ಬಯಸುವ ಆದರೆ ಆರ್ಥಿಕವಾಗಿ ಶಕ್ತರಲ್ಲದ ಕುಟುಂಬಗಳಿಗೆ ಈ ಯೋಜನೆಯು ಆಶಾಕಿರಣವಾಗಲಿದೆ.
ಚಿಕಿತ್ಸಾ ದರಗಳು ಮತ್ತು ಪ್ಯಾಕೇಜ್ ವಿವರ:

ಸರ್ಕಾರ ನಿಗದಿಪಡಿಸಿರುವ ದರಗಳ ಪ್ರಕಾರ, ಅರ್ಹ ಫಲಾನುಭವಿಗಳಿಗೆ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೆಳಗಿನ ದರದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ:
* ಐವಿಎಫ್/ ಐಸಿಎಸ್‌ಐ (IVF/ICSI-ET) – ಭ್ರೂಣಗಳನ್ನು ಫ್ರೀಜ್ ಮಾಡದೆ: 1,20,000 ರೂ.
* ಐವಿಎಫ್/ ಐಸಿಎಸ್‌ಐ (IVF/ICSI-ET) – ಭ್ರೂಣಗಳ ಫ್ರೀಜಿಂಗ್ ಸಹಿತ: 1,30,000 ರೂ.
* ಫ್ರೋಜನ್ ಎಂಬ್ರಿಯೋ ಟ್ರಾನ್ಸ್‌ಫರ್ (FET): ಪ್ರತಿ ಸೈಕಲ್‌ಗೆ 35,000 ರೂ.
ಒಬ್ಬ ಫಲಾನುಭವಿಯು ತಮ್ಮ ಜೀವಿತಾವಧಿಯಲ್ಲಿ ಗರಿಷ್ಠ 3 ಸೈಕಲ್ (Cycles) ಗಳವರೆಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಯಾರಿಗೆ ಸಿಗಲಿದೆ ಈ ಸೌಲಭ್ಯ? (ಅರ್ಹತೆಗಳು):
ಸರ್ಕಾರದ ಆದೇಶದ ಪ್ರಕಾರ, ಫಲಾನುಭವಿಗಳು ಈ ಕೆಳಗಿನ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ:
* ದಂಪತಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು.
* ಈಗಾಗಲೇ ಯಾವುದೇ ಜೀವಂತ ಮಗು ಇರಬಾರದು.
* ವಯಸ್ಸಿನ ಮಿತಿ: ಮಹಿಳೆಯರು ಮತ್ತು ಪುರುಷರು 21 ವರ್ಷ ಮೇಲ್ಪಟ್ಟು ಹಾಗೂ 55 ವರ್ಷದ ಒಳಗಿರಬೇಕು.
* ವೈದ್ಯಕೀಯವಾಗಿ ಬಂಜೆತನ ದೃಢಪಟ್ಟಿರಬೇಕು (ವೈದ್ಯಕೀಯ ದಾಖಲೆಗಳು ಅಗತ್ಯ).
* ಇದು ಕೇವಲ ವಿವಾಹಿತ ದಂಪತಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಯಾವುದಕ್ಕೆ ಅವಕಾಶವಿಲ್ಲ?:
ಈ ಯೋಜನೆಯು ಕೇವಲ ದಂಪತಿಯ ಸ್ವಂತ ಗ್ಯಾಮೆಟ್ (ಅಂಡಾಣು ಮತ್ತು ವೀರ್ಯಾಣು) ಬಳಸಿ ಮಾಡುವ ಚಿಕಿತ್ಸೆಗೆ ಮಾತ್ರ ಸೀಮಿತವಾಗಿದೆ. ದಾನಿಗಳ ಅಂಡಾಣು/ವೀರ್ಯಾಣು (Donor gametes) ಅಥವಾ ಬಾಡಿಗೆ ತಾಯ್ತನ (Surrogacy) ಮೂಲಕ ಮಗು ಪಡೆಯಲು ಈ ಯೋಜನೆಯಡಿ ಅವಕಾಶವಿರುವುದಿಲ್ಲ.
ಪ್ರಾಯೋಗಿಕ ಜಾರಿ:
ಪ್ರಸ್ತುತ ಹೊರಡಿಸಲಾದ ಆದೇಶದನ್ವಯ, ಮೊದಲ ಹಂತದಲ್ಲಿ ಈ ಯೋಜನೆಯನ್ನು ಒಂದು ವರ್ಷದ ಅವಧಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ಆರಂಭದಲ್ಲಿ ಕೇವಲ 120 ಬಿಪಿಎಲ್ ಕಾರ್ಡ್‌ದಾರ ದಂಪತಿಗಳಿಗೆ ಮಾತ್ರ ಈ ಸೌಲಭ್ಯವನ್ನು ಒದಗಿಸಲು ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯವಿರುತ್ತದೆ.























