ಬೆಂಗಳೂರು, ಜ.29 www.bengaluruwire.com : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಹಾಗೂ ನ್ಯಾಯಾಲಯದಿಂದ ‘ಕ್ಲೀನ್ ಚಿಟ್’ ದೊರೆತ ಹಿನ್ನೆಲೆಯಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ನಗರದ ಪ್ಯಾಲೆಸ್ ರಸ್ತೆಯ ಬಾಲಬ್ರೂಯಿ ಅತಿಥಿ ಗೃಹದ ಬಳಿಯಿರುವ ಶ್ರೀ ಭಗವಾನ್ ಮಾರುತಿ ಮಂದಿರದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸಹೋದರ ಉಡುಗೊರೆಯಾಗಿ ನೀಡಿದ್ದ ಭೂಮಿಯ ವಿಚಾರದಲ್ಲಿ ಸ್ನೇಹಮಯಿ ಕೃಷ್ಣ ಅವರು ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದಂತೆ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು, ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದು ವರದಿ ನೀಡಿದ್ದರು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯವು ತಿರಸ್ಕರಿಸಿದೆ. ಈ ಮೂಲಕ ಸಿದ್ದರಾಮಯ್ಯ ಅವರು ನಿಷ್ಪಕ್ಷಪಾತವಾಗಿದ್ದು, ಯಾವುದೇ ಹಸ್ತಕ್ಷೇಪ ನಡೆಸಿಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
ಸತ್ಯಕ್ಕೆ ಜಯ ಸಿಕ್ಕ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದರು. ಅಲ್ಲದೆ, “ಸಿದ್ದರಾಮಯ್ಯ ಪರಿಶುದ್ಧ ನಾಯಕ” ಎಂದು ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯವರಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಮುಖಂಡರಾದ ಎ. ಆನಂದ್, ಜಿ. ಪ್ರಕಾಶ್, ಚಂದ್ರಶೇಖರ್, ಕುಶಾಲ್ ಹರವೇಗೌಡ, ನವೀನ್ ಸುಂಕದಕಟ್ಟೆ, ಉಮೇಶ್, ಸಾಯಿ ನವೀನ್, ಪುಟ್ಟರಾಜು, ಪ್ರವೀಣ್ ರಾವ್, ಹೇಮರಾಜ್ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.























