ಬೆಂಗಳೂರು, ಜ.29 www.bengaluruwire.com : ಸ್ಯಾಂಡಲ್ ವುಡ್ ನಟ ಮಯೂರ್ ಅವರು ಕುಡಿದ ಅಮಲಿನಲ್ಲಿ ಐಷಾರಾಮಿ ಕಾರು ಚಲಾಯಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ಮೂರು ಕಾರುಗಳಿಗೆ ಸರಣಿ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.
ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ತಮ್ಮ ಪಾರ್ಚೂನರ್ ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಿಂದಾಗಿ ಕೆಲಕಾಲ ರಸ್ತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮದ್ಯದ ನಶೆಯಲ್ಲಿದ್ದ ನಟ ಮಯೂರ್, ತಮ್ಮ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವೇಗವಾಗಿ ಬಂದ ನಟನ ಕಾರು, ಒಂದಾದ ಮೇಲೊಂದರಂತೆ ಮೂರು ವಾಹನಗಳಿಗೆ ಗುದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಡಿಕ್ಕಿಯ ರಭಸಕ್ಕೆ ಕಾರುಗಳು ಜಖಂಗೊಂಡಿವೆ.
ಕುಡಿದು ಕಾರು ಚಾಲನೆ ಸಾಬೀತು:

ಘಟನಾ ಸ್ಥಳಕ್ಕೆ ಧಾವಿಸಿದ ಹಲಸೂರು ಸಂಚಾರ ಪೊಲೀಸರು ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು ‘ಡ್ರಿಂಕ್ ಆಂಡ್ ಡ್ರೈವ್’ (DD) ತಪಾಸಣೆ ನಡೆಸಿದಾಗ ನಟ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ (Positive). ಅಚ್ಚರಿಯ ವಿಷಯವೆಂದರೆ, ಅಪಘಾತ ಎಸಗಿದ ನಟನ ಕಾರಿನ ಇನ್ಸೂರೆನ್ಸ್ (Insurance) ಕೂಡ ಲ್ಯಾಪ್ಸ್ ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಪಾರ್ಚೂನರ್ ಕಾರನ್ನು ಸೀಜ್ ಮಾಡಿದ್ದು, ಈ ಸಂಬಂಧ ನಿರ್ಲಕ್ಷ್ಯತನದ ಚಾಲನೆ ಹಾಗೂ ಕುಡಿದು ವಾಹನ ಚಲಾಯಿಸಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ. ಸೆಲೆಬ್ರಿಟಿಗಳ ಇಂತಹ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಪೊಲೀಸ್ ಠಾಣೆ ಮುಂದೆ ಬಡಪಾಯಿ ಚಾಲಕನ ಕಣ್ಣೀರು:
ಈ ಅಪಘಾತದಿಂದಾಗಿ ಕಾರ್ ಮಾಲೀಕ ಕಂ ಚಾಲಕ ಶ್ರೀನಿವಾಸ್ ಎಂಬುವವರ ಬದುಕು ಬೀದಿಗೆ ಬಂದಿದೆ. ಪೊಲೀಸ್ ಸ್ಟೇಷನ್ ಮುಂದೆಯೇ ಕಣ್ಣೀರಿಟ್ಟ ಶ್ರೀನಿವಾಸ್, ‘ನನ್ನ ಹೆಂಡತಿಯ ಒಡವೆ ಅಡವಿಟ್ಟು ಕೇವಲ ಒಂದು ವಾರದ ಹಿಂದಷ್ಟೇ ಈ ಹೊಸ ಕಾರು ಖರೀದಿಸಿದ್ದೆ. ಕಂಪನಿಯೊಂದಕ್ಕೆ ಬಾಡಿಗೆಗೆ ಓಡಿಸುತ್ತಾ ಜೀವನ ಸಾಗಿಸುತ್ತಿದ್ದೆ. ಫೆಬ್ರವರಿ 5ಕ್ಕೆ ಮೊದಲ ಇಎಂಐ (EMI) ಕಟ್ಟಬೇಕಿದೆ. ಈಗ ಕಾರು ಜಖಂಗೊಂಡು ನಿಂತು ಹೋದರೆ ನಾನು ಸಾಲ ತೀರಿಸುವುದು ಹೇಗೆ?’ ಎಂದು ಅಳಲು ತೋಡಿಕೊಂಡಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಮತ್ತು ಹಾನಿಗೊಳಗಾದ ಕಾರಿನ ಮಾಲೀಕರು ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಟ ಮಯೂರ್ ಅವರು ಕುಡಿದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.























