ಬೆಂಗಳೂರು, ಜ.29 www.bengaluruwire.com : ರಾಜ್ಯದ ತಾಂಡಾ, ಗೊಲ್ಲರಹಟ್ಟಿ, ಹಾಡಿಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಿ, ಹಕ್ಕುಪತ್ರ ವಿತರಿಸುವ ಅಭಿಯಾನ ಮುಂದುವರೆದಿದ್ದು, ಬರುವ ಫೆಬ್ರವರಿ 13ರಂದು ಹಾವೇರಿಯಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಬರೋಬ್ಬರಿ 1 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಗಡುವು ವಿಧಿಸಿದ ಸಚಿವರು :
ಫೆ.13 ರ ಕಾರ್ಯಕ್ರಮಕ್ಕೆ ಈಗಾಗಲೇ 86,000 ಫಲಾನುಭವಿಗಳ ಹಕ್ಕುಪತ್ರಗಳನ್ನು ಸಿದ್ಧಪಡಿಸಲಾಗಿದೆ. ಉಳಿದ ಫಲಾನುಭವಿಗಳ ದಾಖಲೆ ಪರಿಶೀಲನೆ ಹಾಗೂ ಹಕ್ಕುಪತ್ರ ಸಿದ್ಧಪಡಿಸುವ ಕಾರ್ಯವನ್ನು ಮುಂದಿನ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದರು.

2.11 ಲಕ್ಷ ಕುಟುಂಬಗಳಿಗೆ ಒಡೆತನ:
“ಹಾಡಿ, ಹಟ್ಟಿ, ತಾಂಡಾಗಳು ಕಂದಾಯ ಗ್ರಾಮಗಳಲ್ಲದ ಕಾರಣ ಅಲ್ಲಿನ ನಿವಾಸಿಗಳು ದಶಕಗಳಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಅವರಿಗೆ ಭೂಮಿಯ ಹಕ್ಕು ನೀಡಿ, ನೆಮ್ಮದಿಯ ಬದುಕು ಕಲ್ಪಿಸಲು 2017ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕ್ರಿಯೆ ಚುರುಕುಗೊಂಡಿದೆ. ಕಳೆದ ವರ್ಷ ಹೊಸಪೇಟೆ ಕಾರ್ಯಕ್ರಮದಲ್ಲಿ 1.11 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿತ್ತು. ಈಗ ಹಾವೇರಿ ಕಾರ್ಯಕ್ರಮದ ಮೂಲಕ ಈ ಸಂಖ್ಯೆ 2.11 ಲಕ್ಷಕ್ಕೆ ಏರಿಕೆಯಾಗಲಿದೆ,” ಎಂದು ಸಚಿವರು ವಿವರಿಸಿದರು.
ಡಿಜಿಟಲ್ ಹಕ್ಕುಪತ್ರ: ಅಲೆದಾಟಕ್ಕೆ ಬ್ರೇಕ್:
ಕೇವಲ ಕಾಗದದ ಹಕ್ಕುಪತ್ರ ನೀಡದೆ, ದಾಖಲೆಗಳ ತಿದ್ದುಪಡಿ ಅಥವಾ ಕಳೆದುಹೋಗುವುದನ್ನು ತಡೆಯಲು ‘ಡಿಜಿಟಲ್ ಹಕ್ಕುಪತ್ರ’ ನೀಡಲಾಗುವುದು. ಸರ್ಕಾರವೇ ಮುಂದೆ ನಿಂತು ಕ್ರಯಪತ್ರದ ಮೂಲಕ ನೋಂದಣಿ ಮಾಡಿಸಿ, ಸ್ಥಳೀಯ ಸಂಸ್ಥೆಗಳಿಂದ ಖಾತೆ ಮಾಡಿಸಿಕೊಡಲಿದೆ. ಇದರಿಂದ ಬಡವರು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಸರ್ವೇ ಇಲಾಖೆ ಆಯುಕ್ತರಾದ ವೆಂಕಟರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.























