ಬೆಂಗಳೂರು, ಜ. 28 www.bengaluruwire.com : ರಾಜ್ಯದ ಕಾರ್ಮಿಕ ಚಳವಳಿಯ ಅಪ್ರತಿಮ ನಾಯಕ, ಎಐಟಿಯುಸಿ (AITUC) ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಾರಿಗೆ ನೌಕರರ ಪಾಲಿನ ಆಪದ್ಬಾಂಧವರಾಗಿದ್ದ ಹಿರಿಯ ಕಾಮ್ರೇಡ್ ಎಚ್.ವಿ. ಅನಂತಸುಬ್ಬರಾವ್ (85) ಅವರು ಬುಧವಾರದಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರ ಹಠಾತ್ ಅಗಲಿಕೆಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕಾರ್ಮಿಕ ಲೋಕ ಬಡವಾಗಿದೆ ಎಂದು ಶೋಕ ವ್ಯಕ್ತಪಡಿಸಿದೆ.
ಎಲ್ಐಸಿ ನೌಕರನಿಂದ ಕಾರ್ಮಿಕ ನಾಯಕನವರೆಗೆ:
ಭಾರತೀಯ ಜೀವವಿಮಾ ನಿಗಮದ (LIC) ನೌಕರರಾಗಿ ವೃತ್ತಿಜೀವನ ಆರಂಭಿಸಿ, ನಂತರ ಪೂರ್ಣಾವಧಿ ಕಾರ್ಮಿಕ ಚಳವಳಿಗೆ ಧುಮುಕಿದ ಅನಂತಸುಬ್ಬರಾವ್ ಅವರು ಕಳೆದ ಆರು ದಶಕಗಳಿಂದ ರಾಜ್ಯದ ಕಾರ್ಮಿಕರ ಧ್ವನಿಯಾಗಿದ್ದರು. ವಿಶೇಷವಾಗಿ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (KSRTC) ಸಿಬ್ಬಂದಿ ಹಾಗೂ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಅವರು ನಡೆಸಿದ ಧೀರೋದತ್ತ ಹೋರಾಟಗಳು ಐತಿಹಾಸಿಕವಾದವು. ಸಾರಿಗೆ ನೌಕರರಿಗೆ ಘನತೆಯ ಬದುಕು ಕಲ್ಪಿಸಿಕೊಡುವಲ್ಲಿ ಅವರ ಪಾತ್ರ ಅವಿಸ್ಮರಣೀಯ.


ಹೋರಾಟದ ಕಣದಲ್ಲೇ ಪ್ರಾಣಬಿಟ್ಟ ಧೀಮಂತ:
ವಿಪರ್ಯಾಸವೆಂದರೆ, ನಾಳೆ (ಜನವರಿ 29) ರಾಜ್ಯದ ರಸ್ತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನಕ್ಕಾಗಿ ಹಮ್ಮಿಕೊಳ್ಳಲಾದ ಜಂಟಿ ಚಳವಳಿಯ ಯಶಸ್ವಿಗಾಗಿ ಅವರು ಸಕ್ರಿಯವಾಗಿ ದುಡಿಯುತ್ತಿದ್ದರು. ಮುಷ್ಕರದ ಮುನ್ನಾದಿನವೇ ಅವರು ಇಹಲೋಕ ತ್ಯಜಿಸಿರುವುದು ಸಾರಿಗೆ ನೌಕರರು ಮತ್ತು ಐಕ್ಯ ಕಾರ್ಮಿಕ ಚಳವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಿಐಟಿಯು ಹೇಳಿಕೆಯಲ್ಲಿ ತಿಳಿಸಿದೆ.
ಸಿಐಟಿಯು ಸಂತಾಪ:
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ, “ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮತ್ತು ಹೊಸ ಕಾರ್ಮಿಕ ಕೋಡ್‌ಗಳ ಜಾರಿ ವಿರುದ್ಧ ದೇಶವ್ಯಾಪಿ ಮುಷ್ಕರದ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಅನಂತಸುಬ್ಬರಾವ್ ಅವರ ಅಗಲಿಕೆ ಆಘಾತ ತಂದಿದೆ.
85ರ ಇಳಿವಯಸ್ಸಿನಲ್ಲೂ ನಗುಮೊಗದಿಂದ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿದ್ದ ಹಿರಿಯ ಚೇತನಕ್ಕೆ ಸಿಐಟಿಯು ರಾಜ್ಯ ಸಮಿತಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ,” ಎಂದು ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಸಿಐಟಿಯು ತನ್ನ ಅತೀವ ಸಾಂತ್ವನವನ್ನು ವ್ಯಕ್ತಪಡಿಸಿದೆ.























