ನವದೆಹಲಿ: ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಅವರನ್ನು ಉದ್ಯಮಿಗಳನ್ನಾಗಿ ರೂಪಿಸಲು ಕೇಂದ್ರ ಸರ್ಕಾರವು ‘ಲಖ್ಪತಿ ದೀದಿ’ (Lakhpati Didi Scheme) ಯೋಜನೆಯಡಿ ಭರ್ಜರಿ ಕೊಡುಗೆಯನ್ನು ನೀಡುತ್ತಿದೆ. ಈ ಯೋಜನೆಯಡಿ ಅರ್ಹ ಮಹಿಳೆಯರು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಅಥವಾ ಇರುವ ವ್ಯವಹಾರವನ್ನು ವಿಸ್ತರಿಸಲು ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲವನ್ನು ಪಡೆಯಬಹುದಾಗಿದೆ.
ಏನಿದು ಲಖ್ಪತಿ ದೀದಿ ಯೋಜನೆ?:
ಮಹಿಳೆಯರು ಕೇವಲ ಗೃಹಿಣಿಯರಾಗಿ ಉಳಿಯದೆ, ಆರ್ಥಿಕ ಸ್ವತಂತ್ರರಾಗಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ದೇಶಾದ್ಯಂತ ಸುಮಾರು 3 ಕೋಟಿ ಮಹಿಳೆಯರನ್ನು ‘ಲಖ್ಪತಿ ದೀದಿ’ಯರನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಕೇವಲ ಸಾಲ ನೀಡುವುದಲ್ಲದೆ, ಮಹಿಳೆಯರಿಗೆ ಅಗತ್ಯವಾದ ಕೌಶಲ್ಯ ತರಬೇತಿಯನ್ನೂ ನೀಡುತ್ತದೆ. ಕರ್ನಾಟಕದಲ್ಲಿ ಈವರೆಗೆ 5,29,876 ಮಹಿಳೆಯರು ಲಖ್ಪತಿ ದೀದಿ ಯೋಜನೆಯ ಫಲಾನುಭವಿಗಳಾಗಿದ್ದಾರೆ, ಇನ್ನು ದೇಶಾದ್ಯಂತ ಒಟ್ಟು 2.91 ಕೋಟಿ ಮಹಿಳೆಯರು ಈ ಯೋಜನೆಯಡಿ 5 ಲಕ್ಷ ರೂ. ತನಕ ಬಡ್ಡಿ ರಹಿತ ಸಾಲ ಪಡೆದಿದ್ದಾರೆ ಎಂದು ಕೇಂದ್ರ ಸರ್ಕಾರದ ಜಾಲ ತಾಣದಲ್ಲಿ ಮಾಹಿತಿ ನೀಡಿದೆ.
ಯೋಜನೆಯ ಪ್ರಮುಖ ಪ್ರಯೋಜನಗಳು:

ಬಡ್ಡಿ ರಹಿತ ಸಾಲ: ಈ ಯೋಜನೆಯಡಿ ಪಡೆಯುವ 1 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಯಾವುದೇ ಬಡ್ಡಿಯನ್ನು ಪಾವತಿಸಬೇಕಿಲ್ಲ.
ಕೌಶಲ್ಯ ತರಬೇತಿ: ಹೊಲಿಗೆ, ಎಲ್‌ಇಡಿ ಬಲ್ಬ್ ತಯಾರಿಕೆ, ಡ್ರೋನ್ ನಿರ್ವಹಣೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ.
ಮಾರುಕಟ್ಟೆ ಸೌಲಭ್ಯ: ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಕಾರವು ಮಾರುಕಟ್ಟೆ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ.
ವಿಮೆ ಸೌಲಭ್ಯ: ಅತಿ ಕಡಿಮೆ ಪ್ರೀಮಿಯಂನಲ್ಲಿ ವಿಮಾ ಸೌಲಭ್ಯವೂ ಲಭ್ಯವಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?:
ಅರ್ಜಿದಾರರು ಭಾರತದ ಕಾಯಂ ನಿವಾಸಿಯಾಗಿರಬೇಕು.
ಕನಿಷ್ಠ 18 ರಿಂದ ಗರಿಷ್ಠ 50 ವರ್ಷ ವಯೋಮಿತಿಯೊಳಗಿರಬೇಕು.
ಮುಖ್ಯವಾಗಿ, ಮಹಿಳೆಯು ಯಾವುದಾದರೊಂದು ಸ್ವಸಹಾಯ ಸಂಘದ (SHG) ಸದಸ್ಯೆಯಾಗಿರಬೇಕು.
ಕುಟುಂಬದ ವಾರ್ಷಿಕ ಆದಾಯವು ನಿಗದಿತ ಮಿತಿಗಿಂತ ಕಡಿಮೆ ಇರಬೇಕು.
ಗಮನಿಸಿ: ಈ ಯೋಜನೆಯ ಲಾಭ ಪಡೆಯಲು ಮಹಿಳೆಯರು ತಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿ ಸ್ವಸಹಾಯ ಸಂಘಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಲಖ್ಪತಿ ದೀದಿ ಜಾಲ ತಾಣದ ಲಿಂಕ್ : Lakhpati Didi
ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಫೋಟೋ, ಮೊಬೈಲ್ ಸಂಖ್ಯೆ























