ಬೆಂಗಳೂರು, ಜ.25 www.bengaluruwire.com : ಬಡವರ ಪಾಲಿನ ಸಂಜೀವಿನಿ ಎಂದೇ ಖ್ಯಾತವಾಗಿರುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು (Kidwai Memorial Institute of Oncology) ಮತ್ತೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದೆ. ಪ್ರತಿಷ್ಠಿತ ‘ದಿ ವೀಕ್’ (The Week) ನಿಯತಕಾಲಿಕ ನಡೆಸಿದ 2025ರ ಸಮೀಕ್ಷೆಯಲ್ಲಿ, ಕಿದ್ವಾಯಿ ಆಸ್ಪತ್ರೆಯು ಭಾರತದ ಅತ್ಯುತ್ತಮ ಆಂಕೊಲಜಿ ಆಸ್ಪತ್ರೆಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದೆ.
ಮೂರು ವಿಭಾಗಗಳಲ್ಲಿಯೂ ಮೇಲುಗೈ:
‘ದಿ ವೀಕ್’ ಮತ್ತು ಹಂಸ ರಿಸರ್ಚ್ (Hansa Research) ಜಂಟಿಯಾಗಿ ನಡೆಸಿದ ಮೌಲ್ಯಮಾಪನದಲ್ಲಿ ಕಿದ್ವಾಯಿ ಸಂಸ್ಥೆಯು ಮೂರು ಪ್ರಮುಖ ವಿಭಾಗಗಳಲ್ಲಿ ಸಾಧನೆ ಮಾಡಿದೆ:
* ಭಾರತದ ಅತ್ಯುತ್ತಮ ಆಂಕೊಲಾಜಿ ಆಸ್ಪತ್ರೆ: 5ನೇ ಸ್ಥಾನ.

* ಭಾರತದ ಸರ್ಕಾರಿ ಆಸ್ಪತ್ರೆಗಳ ವಿಭಾಗ: 3ನೇ ಸ್ಥಾನ.
* ಕರ್ನಾಟಕ ರಾಜ್ಯ ಮಟ್ಟದಲ್ಲಿ: 1ನೇ ಸ್ಥಾನ.
ಈ ಸಮೀಕ್ಷೆಯಲ್ಲಿ ದೇಶಾದ್ಯಂತ 788 ವೈದ್ಯರು ಹಾಗೂ 1,609 ತಜ್ಞರು ಭಾಗವಹಿಸಿ ಆಸ್ಪತ್ರೆಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿದ್ದು, ಕಿದ್ವಾಯಿಯ ಗುಣಮಟ್ಟದ ಚಿಕಿತ್ಸೆಗೆ ರಾಷ್ಟ್ರೀಯ ಮನ್ನಣೆ ದೊರೆತಂತಾಗಿದೆ.
ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮಾರ್ಗದರ್ಶನ:
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ನೇತೃತ್ವ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ (DME) ಬೆಂಬಲದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಕ್ಯಾನ್ಸರ್ ಚಿಕಿತ್ಸೆ, ನಿರಂತರ ಸಂಶೋಧನೆ ಮತ್ತು ಶೈಕ್ಷಣಿಕ ಕೊಡುಗೆಗಳಲ್ಲಿ ಸಂಸ್ಥೆಯು ತೋರುತ್ತಿರುವ ಬದ್ಧತೆಗೆ ಈ ರ‍್ಯಾಂಕಿಂಗ್ ಸಾಕ್ಷಿಯಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಮಗ್ರ ಕ್ಯಾನ್ಸರ್ ಆರೈಕೆಯ ತಾಣ:
1973ರಲ್ಲಿ ಸ್ಥಾಪನೆಯಾದ ಕಿದ್ವಾಯಿ, ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ಭಾರತ ಸರ್ಕಾರದಿಂದ ‘ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ’ವಾಗಿ ಮಾನ್ಯತೆ ಪಡೆದಿದೆ. ಇಲ್ಲಿ ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ವಿಕಿರಣ ಆಂಕೊಲಾಜಿ (Radiation Oncology) ಸೇರಿದಂತೆ ಬಹುಶಿಸ್ತೀಯ ಸೇವೆಗಳು ಒಂದೇ ಸೂರಿನಡಿ ಲಭ್ಯವಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ, ನೆರೆಯ ರಾಜ್ಯಗಳ ಸಾವಿರಾರು ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಇದರ ಹೆಗ್ಗಳಿಕೆ.
ದೇಣಿಗೆಗೆ ಅವಕಾಶ:
ಸಂಸ್ಥೆಯು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ದಾನಿಗಳು ನೀಡುವ ದೇಣಿಗೆಗೆ 1961ರ ಐಟಿ ಕಾಯ್ದೆಯ 80ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇದೆ. ಆಸಕ್ತರು ವೆಬ್‌ಸೈಟ್ www.kmio.karnataka.gov.in ಮೂಲಕ ಸಂಸ್ಥೆಯ ಅಭಿವೃದ್ಧಿಗೆ ನೆರವಾಗಬಹುದು ಎಂದು ನಿರ್ದೇಶಕರು ಕೋರಿದ್ದಾರೆ.






















