ಬೆಳಗಾವಿ/ನಾಸಿಕ್, ಜ.25 www.bengaluruwire.com : ಅದು ಅಕ್ಟೋಬರ್ ತಿಂಗಳ ಕತ್ತಲ ರಾತ್ರಿ.. ಬೆಳಗಾವಿಯ ಚೋರ್ಲಾ ಘಾಟ್‌ನ ಕಡಿದಾದ ತಿರುವುಗಳಲ್ಲಿ ಎರಡು ಬೃಹತ್ ಕಂಟೈನರ್‌ಗಳು ನಿಗೂಢವಾಗಿ ಸಾಗುತ್ತಿದ್ದವು. ಅದರಲ್ಲಿದ್ದುದ್ದು ಸಾಮಾನ್ಯ ಸರಕಲ್ಲ, ಬರೋಬ್ಬರಿ 400 ಕೋಟಿ ರೂಪಾಯಿ ಮೌಲ್ಯದ ರದ್ದಾದ 2000 ಮುಖಬೆಲೆಯ ನೋಟುಗಳು! ಈ ಕಂಟೈನರ್‌ಗಳು ಸಿನಿಮಾ ಶೈಲಿಯಲ್ಲಿ ಕಳ್ಳತನವಾಗಿದ್ದು, ಇದೀಗ ದೇಶದ ಅತಿದೊಡ್ಡ ದರೋಡೆ ಪ್ರಕರಣವಾಗಿ ಹೊರಹೊಮ್ಮಿದೆ.
ಸುಮಾರು ಮೂರು ತಿಂಗಳ ಕಾಲ ಗುಟ್ಟಾಗಿ ಉಳಿದಿದ್ದ ಈ ಪ್ರಕರಣ, ಜನವರಿ 2026ರಲ್ಲಿ ನಾಸಿಕ್‌ನ ಘೋಟಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪಹರಣ ಪ್ರಕರಣ ಒಂದರ ಮೂಲಕ ಜಗಜ್ಜಾಹೀರಾಗಿದೆ. ಮಹಾರಾಷ್ಟ್ರ ಚುನಾವಣೆಗೂ ಮುನ್ನ ಈ ಹಣ ಸಾಗಾಟವಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಚುರುಕುಗೊಂಡಿದೆ.
ಏನಿದು ಪ್ರಕರಣ? ಅಸಲಿಗೆ ನಡೆದಿದ್ದೇನು?:
ಗೋವಾದಿಂದ ಮಹಾರಾಷ್ಟ್ರದ ಕಡೆಗೆ ಸಾಗುತ್ತಿದ್ದ ಎರಡು ಕಂಟೈನರ್‌ಗಳನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಬಳಿ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಇದು ನಿಜವಾದ ದರೋಡೆಯೇ ಅಥವಾ ಹಣವನ್ನು ಸಾಗಿಸುವವರೇ ನಾಟಕವಾಡಿದ್ದಾರೆಯೇ ಎಂಬುದು ಇನ್ನೂ ನಿಗೂಢವಾಗಿದೆ. ಕಂಟೈನರ್‌ನಲ್ಲಿ ಅಂದಾಜು 400 ಕೋಟಿ ರೂ. ಮೌಲ್ಯದ ನಿಷೇಧಿತ ನೋಟುಗಳಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಹರಣದ ಟ್ವಿಸ್ಟ್ ನಿಂದ ಬಯಲಾದ ಸತ್ಯ:
ಈ ಪ್ರಕರಣ ಬೆಳಕಿಗೆ ಬಂದಿದ್ದೇ ಒಂದು ರೋಚಕ ತಿರುವಿನಿಂದ. ಸಂದೀಪ್ ದತ್ತ ಪಾಟೀಲ್ ಎಂಬುವವರು ತಮ್ಮನ್ನು ಥಾಣೆ ಮೂಲದ ಬಿಲ್ಡರ್ ಕಿಶೋರ್ ಸಾವಲಾ ಎಂಬುವವರ ಕಡೆಯವರು ಅಪಹರಿಸಿ, “ಕಳ್ಳತನವಾದ 400 ಕೋಟಿ ಹಣ ಎಲ್ಲಿ?” ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ನಾಸಿಕ್ ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಭೇದಿಸಲು ಹೋದ ಪೊಲೀಸರಿಗೆ ಬೃಹತ್ ಹಗರಣದ ವಾಸನೆ ಬಡಿದಿದೆ.
ತನಿಖೆಯ ಅಪ್‌ಡೇಟ್ (Latest Update):
ಎಸ್‌ಐಟಿ (SIT) ರಚನೆ: ಮಹಾರಾಷ್ಟ್ರ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಬೆಳಗಾವಿ ಪೊಲೀಸರು ಕೂಡ ತನಿಖೆಗೆ ಕೈಜೋಡಿಸಿದ್ದಾರೆ.
7 ಮಂದಿ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಜಯೇಶ್ ಕದಮ್, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ವಿರಾಜ್ ಗಾಂಧಿ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ. ಇತ್ತೀಚೆಗೆ ಡೊಂಬಿವಲಿಯಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಕಿಂಗ್‌ಪಿನ್ ಎಸ್ಕೇಪ್: ಈ ಹಗರಣದ ಪ್ರಮುಖ ಸೂತ್ರಧಾರ ಎನ್ನಲಾದ ಥಾಣೆಯ ಪ್ರಭಾವಿ ಬಿಲ್ಡರ್ ಕಿಶೋರ್ ಸಾವಲಾ ಮತ್ತು ಅಜರ್ ಎಂಬುವವರು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಕಂಟೇನರ್ ನಾಪತ್ತೆಗೆ ರಾಜಕೀಯ ನಂಟು?:
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸಲು ಈ ಹಣವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಬಲವಾದ ಅನುಮಾನವಿದೆ. ರದ್ದಾದ ನೋಟುಗಳನ್ನು ಬದಲಾವಣೆ ಮಾಡಲು ಸಾಗಿಸುತ್ತಿದ್ದರೇ ಅಥವಾ ಕಪ್ಪು ಹಣವನ್ನು ಬಿಳಿ ಮಾಡಲು ಈ ಮಾರ್ಗ ಬಳಸಲಾಗಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. (Image credit : Gemini AI)























