ಬೆಂಗಳೂರು, ಜ.24 www.bengaluruwire.com : ದೇಶವ್ಯಾಪಿ ಸಂಚಲನ ಮೂಡಿಸಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಭೇದಿಸಿ, ಸಮರ್ಥವಾಗಿ ತನಿಖೆ ನಡೆಸಿ, ಆರೋಪಿಗೆ ಕಠಿಣ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜ್ಯ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡಕ್ಕೆ (SIT) ರಾಜ್ಯ ಗೃಹ ಇಲಾಖೆ 35 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ.
ತನಿಖಾ ತಂಡದ ಶ್ರಮಕ್ಕೆ ಸಿಕ್ಕ ಗೌರವ:
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳನ್ನು ಕಲೆಹಾಕಿ, ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸುವಲ್ಲಿ ವಿಶೇಷ ತನಿಖಾ ದಳ (SIT) ಯಶಸ್ವಿಯಾಗಿದೆ. ಅಧಿಕಾರಿಗಳ ಈ ಅವಿರತ ಶ್ರಮದ ಫಲವಾಗಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯಲ್ಲಿ ವೃತ್ತಿಪರತೆ ಮತ್ತು ಕರ್ತವ್ಯ ನಿಷ್ಠೆಯನ್ನು ಉತ್ತೇಜಿಸಲು ಈ ಬಹುಮಾನವನ್ನು ನೀಡಲಾಗಿದೆ.
ಯಾರಿಗೆ ಎಷ್ಟು ಬಹುಮಾನ?:

ಗೃಹ ಇಲಾಖೆಯ ಆದೇಶದನ್ವಯ, ಒಟ್ಟು 35 ಲಕ್ಷ ರೂ.ಗಳನ್ನು ಹುದ್ದೆಗ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ:
* ಡಿಜಿ ಮತ್ತು ಐಜಿಪಿ ಶ್ರೇಣಿ: ತಲಾ 20,000 ರೂ.ನಂತೆ ಒಟ್ಟು 25 ಲಕ್ಷ ರೂ. ಮೀಸಲು.
* ಡಿಜಿಪಿ, ಎಡಿಜಿಪಿ, ಐಜಿಪಿ ಶ್ರೇಣಿ: ತಲಾ 8,000 ರೂ.ನಂತೆ ಒಟ್ಟು 3 ಲಕ್ಷ ರೂ. ಮಂಜೂರು.
* ಇತರೆ ಅಧಿಕಾರಿ/ಸಿಬ್ಬಂದಿ: ತಲಾ 5,000 ರೂ.ನಂತೆ 2 ಲಕ್ಷ ರೂ. ವಿತರಣೆ.
* ಜಿಲ್ಲಾ ಮಟ್ಟದ ಅಧಿಕಾರಿಗಳು: ತಲಾ 5,000 ರೂ.ನಂತೆ ಒಟ್ಟು 1 ಲಕ್ಷ ರೂ. ಬಹುಮಾನ.
ಪುರಸ್ಕೃತ ಅಧಿಕಾರಿಗಳು ಇವರು :
ಒಟ್ಟು 30 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಪ್ರಮುಖವಾಗಿ ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್‌ಪಿಗಳಾದ ಸುಮನ್ ಡಿ. ಪನ್ನೇಕರ್ ಹಾಗೂ ಸಿ.ಎ. ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್‌ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ದನ್, ಶೋಭಾ ಜಿ., ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ ತಂಡದ ಇತರ ಸದಸ್ಯರು ಈ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.
ಸರ್ಕಾರದ ಈ ನಡೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.






















