ಬೆಂಗಳೂರು, ಜ.24 www.bengaluruwire.com : ಸಿಲಿಕಾನ್ ಸಿಟಿಯನ್ನು ಕಾಡುತ್ತಿರುವ ತ್ಯಾಜ್ಯ ನಿರ್ವಹಣೆ, ವಾಯುಮಾಲಿನ್ಯ ಹಾಗೂ ಪ್ಲಾಸ್ಟಿಕ್ ಬಳಕೆಯಂತಹ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸೂಚಿಸುವಲ್ಲಿ ಯಶಸ್ವಿಯಾದ ಐದು ಭರವಸೆಯ ಸ್ಟಾರ್ಟ್‌ಅಪ್‌ಗಳು ತಲಾ 25 ಲಕ್ಷ ರೂ. ಬಹುಮಾನವನ್ನು ಮುಡಿಗೇರಿಸಿಕೊಂಡಿವೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬೆಂಬಲದೊಂದಿಗೆ ‘ಅನ್‌ಬಾಕ್ಸಿಂಗ್ ಬಿಎಲ್‌ಆರ್’ (Unboxing BLR) ಆಯೋಜಿಸಿದ್ದ ಪ್ರತಿಷ್ಠಿತ “ನಮ್ಮ ಬೆಂಗಳೂರು ಚಾಲೆಂಜ್- 2026” ಸ್ಪರ್ಧೆಯಲ್ಲಿ ಈ ಐದು ಸ್ಟಾರ್ಟ್‌ಅಪ್‌ಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ನಗರದ ಬಿಐಸಿಯಲ್ಲಿ ನಡೆದ ಸಮಾರಂಭದಲ್ಲಿ ಈ ವಿಜೇತ ತಂಡಗಳನ್ನು ಘೋಷಿಸಲಾಯಿತು.
ನಗರದ ಸಮಸ್ಯೆಗಳಿಗೆ ತಾಂತ್ರಿಕ ಮತ್ತು ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಚಾಲೆಂಜ್‌ಗೆ 60ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ ಐದು ಅತ್ಯುತ್ತಮ ಐಡಿಯಾಗಳನ್ನು ಆಯ್ಕೆ ಮಾಡಿ ಪುರಸ್ಕರಿಸಲಾಯಿತು.
ವಿಜೇತ 5 ಸ್ಟಾರ್ಟ್‌ಅಪ್‌ಗಳು ಮತ್ತು ಅವುಗಳ ಪರಿಹಾರಗಳು:

ಕಾರ್ಬನ್ ಕ್ರಾಫ್ಟ್ ಡಿಸೈನ್ (Carbon Craft Design): ಕೈಗಾರಿಕಾ ತ್ಯಾಜ್ಯಗಳನ್ನು ಮರುಬಳಕೆ ಮಾಡಿ ಅದರಿಂದ ಪರಿಸರ ಸ್ನೇಹಿ ‘ಕಾರ್ಬನ್ ಬ್ಲಾಕ್’ಗಳನ್ನು ತಯಾರಿಸುವ ತಂತ್ರಜ್ಞಾನ.
ಸತಿಕ್ಯೂ (Satique): ನಿರ್ಮಾಣ ವಲಯದಲ್ಲಿ ಕ್ರಾಂತಿ ತರಬಲ್ಲ, ಅತ್ಯಂತ ಕಡಿಮೆ ಇಂಗಾಲ (Carbon) ಬಿಡುಗಡೆ ಮಾಡುವ ಮುಂದಿನ ಪೀಳಿಗೆಯ ಸಿಮೆಂಟ್ ಬೈಂಡರ್‌ಗಳ ಅಭಿವೃದ್ಧಿ.
ಟೆಲ್ಲಸ್ ಹ್ಯಾಬಿಟಟ್ (Tellus Habitat): ಕೊಳಚೆ ನೀರುಗಳ ಸಮರ್ಪಕ ಶುದ್ಧೀಕರಣ ಹಾಗೂ ಅದರ ಮರುಬಳಕೆಗೆ ಸುಸ್ಥಿರ ಪರಿಹಾರ.
ಗೋ ಡು ಗುಡ್ (Go Do Good): ಆಹಾರ ಪ್ಯಾಕೇಜಿಂಗ್‌ನಲ್ಲಿ ಪ್ಲಾಸ್ಟಿಕ್ ಪದರಗಳ ಬದಲಿಗೆ, ಆರೋಗ್ಯಕ್ಕೆ ಲಾಭದಾಯಕವಾದ ಸಸ್ಯ ಆಧಾರಿತ ಲೇಪನಗಳ ಅಳವಡಿಕೆ.
ಸನ್‌ಬರ್ಡ್ ಸ್ಟ್ರಾ (Sunbird Straw): ಬಿಸಾಡಬಹುದಾದ ಪ್ಲಾಸ್ಟಿಕ್ ಸ್ಟ್ರಾ ಬದಲಿಗೆ ತೆಂಗಿನ ಎಲೆಗಳಿಂದ ಸ್ಟ್ರಾ ತಯಾರಿಕೆ. ಇದು ಬಳಕೆಯ ನಂತರ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
ಇನ್ನಷ್ಟು ಐಡಿಯಾಗಳಿಗೆ ಸ್ವಾಗತ:
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್, “ಬೆಂಗಳೂರು ರಸ್ತೆ ಗುಂಡಿ, ತ್ಯಾಜ್ಯ ನಿರ್ವಹಣೆಯಂತಹ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರದೊಂದಿಗೆ ಬರುವ ಸ್ಟಾರ್ಟ್‌ಅಪ್‌ಗಳಿಗೆ ನಮ್ಮ ಸ್ವಾಗತವಿದೆ. ಕೆರೆ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ‘ಫ್ಲೇಜೆನ್’ ಸ್ಟಾರ್ಟ್‌ಅಪ್ ನೀಡಿದ ಐಡಿಯಾ ವಿಭಿನ್ನವಾಗಿದ್ದು, ಅವರೊಂದಿಗೆ ಚರ್ಚಿಸಲು ಆಸಕ್ತಿ ಹೊಂದಿದ್ದೇವೆ,” ಎಂದು ಹೇಳಿದರು.
ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಹ-ಸಂಸ್ಥಾಪಕ ಪ್ರಶಾಂತ್ ಪ್ರಕಾಶ್ ಮಾತನಾಡಿ, “ಬೆಂಗಳೂರು ಆಧುನೀಕರಣಗೊಂಡಂತೆ ಹವಾಮಾನ ವೈಪರೀತ್ಯದ ಒತ್ತಡಕ್ಕೂ ಒಳಗಾಗುತ್ತಿದೆ. ಇದಕ್ಕೆ ಸರ್ಕಾರ ಮತ್ತು ಉದ್ಯಮಿಗಳು ಸೇರಿ ಪರಿಹಾರ ಕಂಡುಕೊಳ್ಳಬೇಕಿದೆ,” ಎಂದರು. ಸಿಇಒ ಮಾಲಿನಿ ಗೋಯಲ್ ಅವರು, ಪರಿಹಾರಗಳ ಅಳವಡಿಕೆಯೇ ದೊಡ್ಡ ಸವಾಲಾಗಿದ್ದು, ಈ ಚಾಲೆಂಜ್ ಮೂಲಕ ಒಂದೊಂದೇ ಹೆಜ್ಜೆ ಇಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸೋಶಿಯಲ್ ಆಲ್ಫಾ ಸಂಸ್ಥಾಪಕ ಮನೋಜ್ ಕುಮಾರ್, ಬಿಐಎಎಲ್ ಸಿಇಒ ಹರಿಮರಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.






















