ಪಹಲ್ಗಾಮ್ (ಶ್ರೀನಗರ) ಜ.23 www.bengaluruwire.com ,: ದೀರ್ಘಕಾಲದ ನಿರೀಕ್ಷೆಯ ನಂತರ, ಭೂಲೋಕದ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರ ಕಣಿವೆಯಲ್ಲಿ ಕೊನೆಗೂ ಹಿಮಪಾತವಾಗತೊಡಗಿದೆ.
ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ ಸೇರಿದಂತೆ ಕಣಿವೆಯಾದ್ಯಂತ ಶುಕ್ರವಾರ (ಜನೆವರಿ 23) ಋತುವಿನ ಮೊದಲ ಭಾರಿ ಹಿಮಪಾತವಾಗಿದ್ದು (Season’s First Snowfall), ಇಡೀ ಪ್ರದೇಶವು ಶ್ವೇತವರ್ಣದ ಹೊದಿಕೆಯನ್ನು ಹೊದ್ದಂತೆ ಕಂಗೊಳಿಸುತ್ತಿದೆ.

ಕಳೆದ ಮೂರು ತಿಂಗಳುಗಳಿಂದ ಕಾಶ್ಮೀರದಲ್ಲಿ ತೀವ್ರ ಒಣ ಹವೆ (Dry Spell) ಆವರಿಸಿತ್ತು. ಚಳಿಗಾಲದ ಕಠಿಣ ಅವಧಿಯಾದ ‘ಚಿಲ್ಲೈ ಕಲನ್’ (Chillai Kalan) ಬಹುತೇಕ ಒಣಗಿದಂತೆಯೇ ಸಾಗಿತ್ತು. ಆದರೆ, ಶುಕ್ರವಾರ ಮುಂಜಾನೆಯಿಂದ ಆರಂಭವಾದ ಹಿಮಪಾತವು ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಪಹಲ್ಗಾಮ್‌ನಲ್ಲಿ ಸುಮಾರು 4 ರಿಂದ 6 ಇಂಚುಗಳಷ್ಟು ಹಿಮ ಸುರಿದಿದ್ದು, ಮರಗಿಡಗಳು, ರಸ್ತೆಗಳು ಮತ್ತು ಮನೆಗಳ ಚಾವಣಿಗಳು ಹಿಮದಿಂದ ಆವೃತವಾಗಿವೆ.
ಪ್ರವಾಸಿಗರ ಸಂಭ್ರಮ:

ಹಿಮಪಾತದ ಸುದ್ದಿ ತಿಳಿಯುತ್ತಿದ್ದಂತೆ ಪಹಲ್ಗಾಮ್‌ಗೆ ಲಗ್ಗೆ ಇಟ್ಟಿರುವ ಪ್ರವಾಸಿಗರು ಹಿಮದಲ್ಲಿ ಆಟವಾಡಿ ಸಂಭ್ರಮಿಸುತ್ತಿದ್ದಾರೆ. “ನಾವು ಇದಕ್ಕಾಗಿಯೇ ಕಾಯುತ್ತಿದ್ದೆವು, ಪಹಲ್ಗಾಮ್ ಈಗ ನಿಜವಾದ ಸ್ವರ್ಗದಂತೆ ಕಾಣುತ್ತಿದೆ,” ಎಂದು ಪ್ರವಾಸಿಗರೊಬ್ಬರು ಹರ್ಷ ವ್ಯಕ್ತಪಡಿಸಿದರು. ಹಿಮವಿಲ್ಲದೆ ಕಂಗೆಟ್ಟಿದ್ದ ಹೋಟೆಲ್ ಮಾಲೀಕರು, ಟ್ಯಾಕ್ಸಿ ಚಾಲಕರು ಮತ್ತು ಪ್ರವಾಸೋದ್ಯಮ ಅವಲಂಬಿತ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಜನಜೀವನ ಅಸ್ತವ್ಯಸ್ತ:
ಒಂದೆಡೆ ಹಿಮಪಾತವು ಪ್ರವಾಸಿಗರಿಗೆ ಹಬ್ಬದೂಟವಾದರೆ, ಸ್ಥಳೀಯ ಜನಜೀವನಕ್ಕೆ ಸ್ವಲ್ಪಮಟ್ಟಿನ ಅಡ್ಡಿಯುಂಟುಮಾಡಿದೆ. ಭಾರೀ ಹಿಮಪಾತ ಮತ್ತು ಮಂಜಿನಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿನ ವಿಮಾನ ಹಾರಾಟಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ (NH-44) ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಪಹಲ್ಗಾಮ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 4.4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಚಳಿ ತೀವ್ರಗೊಂಡಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕಾಶ್ಮೀರದಾದ್ಯಂತ ಸಾಧಾರಣದಿಂದ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ. ಜನವರಿ 26 ರ ಸುಮಾರಿಗೆ ಮತ್ತೊಂದು ‘ವೆಸ್ಟರ್ನ್ ಡಿಸ್ಟರ್ಬೆನ್ಸ್’ (Western Disturbance) ಪರಿಣಾಮ ಬೀರಲಿದ್ದು, ಮಳೆ ಮತ್ತು ಹಿಮಪಾತ ಮುಂದುವರಿಯುವ ನಿರೀಕ್ಷೆಯಿದೆ.























