ಬೆಂಗಳೂರು, ಜ.23 www.bengaluruwire.com : ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಂಡವಾಳ ಹೂಡಿಕೆದಾರರಿಗೆ ಎದುರಾಗುತ್ತಿದ್ದ ಅಡೆತಡೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ.
ಇಂಧನ ಘಟಕಗಳ ಸ್ಥಾಪನೆಗೆ ಅಗತ್ಯವಿರುವ ಭೂ ಪರಿವರ್ತನೆ (Land Conversion) ಪ್ರಕ್ರಿಯೆಯನ್ನು ಸರಳಗೊಳಿಸುವ ‘ಸ್ವಯಂ ಚಾಲಿತ ಭೂ ಪರಿವರ್ತನೆ’ ನೂತನ ತಂತ್ರಾಂಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ಚಾಲನೆ ನೀಡಿದರು.
ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹೊಸ ವ್ಯವಸ್ಥೆಯು ಮಧ್ಯವರ್ತಿಗಳ ಹಾವಳಿಗೆ ಶಾಶ್ವತ ಕಡಿವಾಣ ಹಾಕಲಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನಾಂದಿ ಹಾಡಲಿದೆ ಎಂದರು.
ಮಧ್ಯವರ್ತಿಗಳಿಲ್ಲ, ವಿಳಂಬವಿಲ್ಲ:

“ಈ ಹಿಂದೆ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆಗೆ ಭೂ ಪರಿವರ್ತನೆ ಮಾಡಿಸಲು ಕನಿಷ್ಠ 6 ತಿಂಗಳು ಕಾಯಬೇಕಿತ್ತು. ಈ ವಿಳಂಬದ ಲಾಭವನ್ನು ಮಧ್ಯವರ್ತಿಗಳು ಪಡೆಯುತ್ತಿದ್ದರು ಮತ್ತು ಭ್ರಷ್ಟಾಚಾರ ಮಿತಿಮೀರಿತ್ತು. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿತ್ತು. ಈಗ ಜಾರಿಗೆ ತಂದಿರುವ ಸ್ವಯಂ ಚಾಲಿತ ತಂತ್ರಾಂಶದಿಂದ ನೈಜ ಹೂಡಿಕೆದಾರರು ನೇರವಾಗಿ, ತ್ವರಿತವಾಗಿ ಅನುಮತಿ ಪಡೆಯಬಹುದು. ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ,” ಎಂದು ಸಚಿವರು ವಿವರಿಸಿದರು.
ಇಂಧನ ಭದ್ರತೆಯೇ ಗುರಿ:
ದೇಶದ ಆರ್ಥಿಕ ಅಭಿವೃದ್ಧಿಗೆ ಇಂಧನ ಭದ್ರತೆ ಅತ್ಯಗತ್ಯ. ಕೃಷಿ ವಲಯವು ಶೇ.45ರಷ್ಟು ಉದ್ಯೋಗವನ್ನು ನೀಡುತ್ತಿದ್ದು, ರೈತರಿಗೆ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸಲು ನವೀಕರಿಸಬಹುದಾದ ಇಂಧನ ಮೂಲಗಳೇ ಪರಿಹಾರ ಎಂದು ಕೃಷ್ಣ ಬೈರೇಗೌಡ ಪ್ರತಿಪಾದಿಸಿದರು. ದೇಶಾದ್ಯಂತ 500 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಇದ್ದು, ಕರ್ನಾಟಕ ಈಗಾಗಲೇ ಶೇ.12-13ರಷ್ಟು ಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 40 ರಿಂದ 50 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದರು.
ಗುಜರಾತ್, ರಾಜಸ್ಥಾನಕ್ಕಿಂತ ನಾವೇ ಮುಂದು:
ಇದೇ ವೇಳೆ ಮಾತನಾಡಿದ ಸಚಿವರು, “ಗುಜರಾತ್ ಮತ್ತು ರಾಜಸ್ಥಾನದಲ್ಲಿ ಮರುಭೂಮಿಯಂತಹ ಪಾಳು ಭೂಮಿಯಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಕೃಷಿಯೋಗ್ಯ ಭೂಮಿಯನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದನೆಯಲ್ಲಿ ನಾವು ನಂಬರ್ 1 ಸ್ಥಾನದಲ್ಲಿದ್ದೇವೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃಧ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ, ಹಿರಿಯ ಅಧಿಕಾರಿಗಳಾದ ಗೌರವ್ ಗುಪ್ತಾ, ರಾಜೇಂದ್ರ ಕುಮಾರ್ ಕಟಾರಿಯಾ ಮತ್ತು ಮೀನಾ ನಾಗರಾಜ್ ಉಪಸ್ಥಿತರಿದ್ದರು.






















