ಬೆಂಗಳೂರು, ಜ.22 www.bengaluruwire.com : ಆಧುನಿಕತೆಯ ಭರಾಟೆಯಲ್ಲಿ ಮರೆತು ಹೋಗುತ್ತಿರುವ ಸಿರಿಧಾನ್ಯಗಳ ಬಳಕೆಯನ್ನು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮತ್ತೆ ಆರಂಭಿಸಬೇಕು. ಈ ಮೂಲಕ ನಮ್ಮ ನೆಲದ ಮೂಲ ಧಾನ್ಯಗಳ ಮಹತ್ವ ಮತ್ತು ಲಾಭವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಕರೆ ನೀಡಿದರು.
ನಗರದಲ್ಲಿ 2025-26 ನೇ ಸಾಲಿನ ಅಂತರಾಷ್ಟ್ರೀಯ ವಾಣಿಜ್ಯ ಮೇಳದ ಅಂಗವಾಗಿ, ರಾಷ್ಟ್ರೀಯ ಅಹಾರ ಮತ್ತು ಪೌಷ್ಟಿಕ ಅಭಿಯಾನ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ‘ಬೆಂಗಳೂರು ನಗರ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯಕ್ಕೆ ಸಿರಿಧಾನ್ಯವೇ ಸಂಜೀವಿನಿ:
“ಇತ್ತೀಚಿನ ದಿನಗಳಲ್ಲಿ ಗೋಧಿ ಮತ್ತು ಭತ್ತ ನಮ್ಮ ದೈನಂದಿನ ಆಹಾರ ಪದ್ಧತಿಯನ್ನು ಆವರಿಸಿಕೊಂಡಿದ್ದು, ಪೌಷ್ಟಿಕಾಂಶಗಳ ಆಗರವಾಗಿರುವ ಸಿರಿಧಾನ್ಯಗಳು ಮೂಲೆಗುಂಪಾಗಿವೆ. ಮಕ್ಕಳಿಗೆ ರಾಗಿ ಮುದ್ದೆ ಅಥವಾ ರಾಗಿಯ ಖಾದ್ಯಗಳನ್ನು ಉಣಬಡಿಸುವುದೇ ಅಪರೂಪವಾಗಿದೆ. ಎಷ್ಟೋ ಮಕ್ಕಳಿಗೆ ಸಿರಿಧಾನ್ಯಗಳ ಹೆಸರೇ ತಿಳಿದಿಲ್ಲದಿರುವುದು ವಿಪರ್ಯಾಸ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಅತ್ಯಗತ್ಯವಾಗಿದ್ದು, ಸಿರಿಧಾನ್ಯಗಳ ನಿರಂತರ ಸೇವನೆಯಿಂದ ದೈಹಿಕ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಲು ಸಾಧ್ಯ,” ಎಂದು ಪಲ್ಲವಿ ಹೊನ್ನಾಪುರ ಅಭಿಪ್ರಾಯಪಟ್ಟರು.

ಬೆಳೆಗಳ ಜೊತೆಗೆ ಬಳಕೆ ಹೆಚ್ಚಲಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ನಗರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ಸೀತಾ ಅವರು ಮಾತನಾಡಿ, “ಕೃಷಿ ಇಲಾಖೆಯು ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಆದರೆ ಕೇವಲ ಬೆಳೆದರೆ ಸಾಲದು, ಅದರ ಬಳಕೆಯೂ ಅದೇ ಪ್ರಮಾಣದಲ್ಲಿ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಿರಿಧಾನ್ಯಗಳ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಲು ಮುಂದಾಗಬೇಕು,” ಎಂದು ತಿಳಿಸಿದರು.
60ಕ್ಕೂ ಹೆಚ್ಚು ಬಗೆಯ ಅಡುಗೆಗಳ ಪ್ರದರ್ಶನ:
ಈ ಪಾಕ ಸ್ಪರ್ಧೆಯಲ್ಲಿ ವೃತ್ತಿಪರರು, ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಮತ್ತು ಇಲಾಖಾ ಸಿಬ್ಬಂದಿಯನ್ನು ಹೊರತುಪಡಿಸಿ, ಕೇವಲ ರೈತರು ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಸುಮಾರು 60ಕ್ಕೂ ಹೆಚ್ಚು ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿ, ಸಿರಿಧಾನ್ಯಗಳಿಂದ ತಯಾರಿಸಿದ ಸಿಹಿ ಮತ್ತು ಖಾರದ ತಿನಿಸುಗಳನ್ನು ಪ್ರದರ್ಶಿಸಿದರು. ಅಲ್ಲದೆ, ಮರೆತು ಹೋದ ಅಪರೂಪದ ಖಾದ್ಯಗಳನ್ನು ತಯಾರಿಸಿ ನೋಡುಗರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.























